ಪ್ಯಾರಿಸ್, ಮೇ 09 (Daijiworld News/MB) : ಕೊರೊನಾ ವೈರಸ್ ರೋಗದ ಹೊಸ ಹೊಸ ಲಕ್ಷಣಗಳು ಪತ್ತೆಯಾಗುತ್ತಲ್ಲೇ ಇದ್ದು ಈಗ ಅದರ ಪ್ರಭಾವವೂ ಮೆದುಳಿನಿಂದ ಹಿಡಿದು ಮೂತ್ರಪಿಂಡಗಳು ಸೇರಿದಂತೆ ದೇಹದ ಎಲ್ಲ ಅಂಗಗಳ ಮೇಲೆಯೂ ಬೀರಿರುವಂತೆ ಭಾಸವಾಗುತ್ತಿದೆ.
ಈ ಕುರಿತು ನೇಚರ್ ರಿವೀವ್ಸ್ನಲ್ಲಿ ಬರೆದುಕೊಂಡಿರುವ ನ್ಯಾನ್ಜಿಂಗ್ ವೈದ್ಯಕೀಯ ವಿಶ್ವವಿದ್ಯಾಲಯದ ಮೂತ್ರಶಾಸ್ತ್ರ ವಿಭಾಗದ ಸಂಶೋಧಕರು, ರೋಗಿಗಳು ತೀವ್ರವಾದ ಮೂತ್ರದ ತೊಂದರೆಗಳು ಮತ್ತು ತೀವ್ರ ಮೂತ್ರಪಿಂಡದ ಗಾಯದ ತೊಂದರೆಯಿಂದಾಗಿ ಬಳಲುತ್ತಿದ್ದಾರೆ ಎಂದು ತಿಳಿಸಿದೆ.
ಮೊದಲು ಸಾಮಾನ್ಯವಾದ ಫ್ಲೂ ಜ್ವರದ ಲಕ್ಷಣಗಳಾದ ಶೀತ, ತಲೆನೋವು ಮತ್ತು ಜ್ವರ ಮೊದಲಾದ ಲಕ್ಷಣಗಳು ಕೊರೊನಾದಲ್ಲಿ ಕಾಣಿಸಿಕೊಂಡಿದ್ದು ಕಳೆದ ಮೂರು ವಾರಗಳಿಂದ ರೋಗದ ಲಕ್ಷಣಗಳು ಹೆಚ್ಚುತ್ತಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಕೆಂಟ್ ವಿಶ್ವವಿದ್ಯಾನಿಲಯದ ವೈರಾಣು ಶಾಸ್ತ್ರದ ಹಿರಿಯ ಉಪನ್ಯಾಸಕರಾಗಿರುವ ಜೆರೆಮಿ ರೋಸ್ಮನ್, ಈ ಕೊರೊನಾ ವೈರಸ್ ಮಾನವನ ದೇಹದ ಮೇಲೆ ಒತ್ತಡ ಹೇರಬಹುದು. ಇತ್ತೀಚೆಗೆ ನ್ಯೂಯಾರ್ಕ್, ಲಂಡನ್ ಹಾಗೂ ಪ್ಯಾರಿಸ್ಗಳಲ್ಲಿ ಊತ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ 12 ಮಕ್ಕಳಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ವೈರಸ್ಗಳು ಎರಡು ವಿಧಗಳಲ್ಲಿ ರೋಗ ಉಂಟು ಮಾಡಬಹುದಾಗಿದೆ. ವೈರಸ್ಗಳು ಸೃಷ್ಟಿಯಾಗುವ ಸ್ಥಳಗಳಲ್ಲಿನ ಅಂಗಾಂಶಗಳು ನಾಶಗೊಳ್ಳಬಹುದು ಅಥವಾ ರೋಗದ ವಿರುದ್ಧದ ಹೋರಾಟದಲ್ಲಿ ತೊಡಗುವುದರಿಂದ ರೋಗ ನಿರೋಧಕ ವ್ಯವಸ್ಥೆಯಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡು ಹಾನಿ ಉಂಟಾಗಬಹುದು ಎಂದು ಹೇಳಿದ್ದಾರೆ.