ಕುವೈತ್, ಮೇ 11(Daijiworld News/MSP): ಕುವೈತ್ ನಲ್ಲಿ ಭಾರತೀಯ ಮೂಲದ ದಂತವೈದ್ಯ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಕೋವಿಡ್ -19 ಗೆ ಬಲಿಯಾದ ದೇಶದ ಎರಡನೇ ವೈದ್ಯಕೀಯ ವೃತ್ತಿಪರರಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
54 ವರ್ಷದ ವಾಸುದೇವ ರಾವ್ ಕುವೈತ್ ಜಬೆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ ಅಲ್ಲಿನ ಸುದ್ದಿ ವೆಬ್ಸೈಟ್ ಟೈಮ್ಸ್ ಕುವೈತ್ ಡಾಟ್ ಕಾಮ್ ವರದಿ ಮಾಡಿದೆ.
ಕಳೆದ 15 ವರ್ಷದಿಂದ ಕುವೈತ್ ನಲ್ಲಿ ವಾಸವಾಗಿದ್ದ ರಾವ್, ಸರ್ಕಾರಿ ಸ್ವಾಮ್ಯದ ಕಂಪನಿಯಾದ ಕುವೈತ್ ಪೆಟ್ರೋಲಿಯಂ ಕಾರ್ಪೊರೇಶನ್ನ ಅಂಗಸಂಸ್ಥೆಯಾದ ಕುವೈತ್ ಆಯಿಲ್ ಕಂಪನಿಯಲ್ಲಿ ಎಂಡೋಡೆಂಟಿಸ್ಟ್ ಆಗಿ ಕೆಲಸ ನಿರ್ವಹಿಸಿದ್ದರು. ಭಾರತೀಯ ದಂತ ವೈದ್ಯ ಸಂಘದ ಸದಸ್ಯರು ಆಗಿದ್ದ ಅವರ ಅಗಲುವಿಕೆಗೆ ಸಂಸ್ಥೆ ಸಂತಾಪ ಸೂಚಿಸಿದೆ.
ಶುಕ್ರವಾರ, ಈಜಿಪ್ಟ್ ಇ.ಎನ್.ಟಿ ತಜ್ಞ ತಾರೆಕ್ ಹುಸೇನ್ ಮೊಖೈಮರ್ ಕೋವಿಡ್ -19 ರಿಂದ ನಿಧನರಾಗಿದ್ದರು. 62 ವರ್ಷದ ಮೊಖೈಮರ್ ಕುವೈತ್ನಲ್ಲಿ 20 ಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ್ದರು. ಇದು ಕುವೈತ್ನ ಮೊದಲ ವೈದ್ಯಕೀಯ ಸಾವುನೋವು ಎಂದು ಗಲ್ಫ್ ನ್ಯೂಸ್ ವರದಿ ಮಾಡಿತ್ತು.
ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮನೆಗೆ ಕರೆತರುವ ಸರ್ಕಾರದ ವಂದೇ ಭಾರತ್ ಮಿಷನ್ನ ಅಂಗವಾಗಿ ಮಾಡುತ್ತಿದ್ದು ಒಟ್ಟು 171 ಜನರು ಭಾನುವಾರ ಕುವೈತ್ನಿಂದ ಚೆನ್ನೈಗೆ ಆಗಮಿಸಿದ್ದಾರೆ. ಕೊರೊನಾ ವೈರಸ್ ನಿಂದ ಕುವೈತ್ನಲ್ಲಿ 58ಜನ ಬಲಿಯಾಗಿದ್ದು 8,688 ಮಂದಿ ಸೋಂಕು ಪೀಡಿತರಾಗಿದ್ದಾರೆ.