ವುಹಾನ್, ಮೇ 13 (Daijiworld News/MB) : ವಿಶ್ವದಲ್ಲೇ ಮೊದಲು ಕೊರೊನಾ ಸೋಂಕು ಪತ್ತೆಯಾದ ವುಹಾನ್ ಸೋಂಕು ಮುಕ್ತವಾಗಿ ಎಲ್ಲಾ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯನ್ನು ಮುಚ್ಚಲಾಗಿತ್ತು. ಆದರೆ ಆದಾದ ಕೇಲವೇ ವಾರಗಳಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಪತ್ತೆಯಾಗಿದ್ದು ಇದೇ ಕಾರಣಕ್ಕೆ ಚೀನಾ ಸರ್ಕಾರ ಇಡೀ ವುಹಾನ್ ನಗರದ 11 ಮಿಲಿಯನ್ ಜನರ ಕೊರೊನಾ ಪರೀಕ್ಷೆಗೆ ಮುಂದಾಗಿದೆ.
ಕೊರೊನಾ ಸೋಂಕು ಮತ್ತೆ ಹರಡಿದರೆ ಎಂಬ ಆತಂಕಕ್ಕೆ ಒಳಗಾದ ಚೀನಾ ಸರ್ಕಾರ, 10 ದಿನಗಳ ಕಾಲಾವಧಿಯಲ್ಲಿ ಎಲ್ಲಾ ಜಿಲ್ಲೆಗಳು ತನ್ನ ವ್ಯಾಪ್ತಿಯಲ್ಲಿ ಇಡೀ ಜನಸಂಖ್ಯೆಯ ಮೇಲೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ನಡೆಸಲು ಯೋಜನೆಗಳು ಮತ್ತು ವ್ಯವಸ್ಥೆಗಳನ್ನು ಮಾಡಬೇಕು ಎಂದು ಸ್ಥಳೀಯ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.
76 ದಿನಗಳ ಲಾಕ್ಡೌನ್ ಬಳಿಕ ಏಪ್ರಿಲ್ 8 ರಂದು ವುಹಾನ್ ನಗರವನ್ನು ಮತ್ತೆ ತೆರೆಯಲಾಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಡೊಂಗ್ ಕ್ಸಿ ಹು ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾನುವಾರ ಮತ್ತು ಸೋಮವಾರ ಆರು ಹೊಸ ಪ್ರಕರಣಗಳು ದೃಢಪಟ್ಟಿದೆ.