ವಾಷಿಂಗ್ಟನ್, ಮೇ 13 (DaijiworldNews/PY) : ಎಲ್ಲಾ ಕಡೆ ಕೊರೊನಾ ವೈರಸ್ ಕಾರಣದಿಂದಲೇ ಸಾವನ್ನಪ್ಪುತ್ತಿದ್ದಾರೆ. ನನ್ನ ಬಳಿ ಈ ರೀತಿಯಾದ ಪ್ರಶ್ನೆಯನ್ನು ಕೇಳಬೇಡಿ. ನೀವು ಇಂತಹ ಪ್ರಶ್ನೆಯನ್ನು ಚೀನಾದ ಬಳಿ ಕೇಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿ ಸಂಸ್ಥೆಯೊಂದರ ವರದಿಗಾರ್ತಿಯೊಬ್ಬಳು ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು, ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಕೋಪಗೊಂಡ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಕುರಿತಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಿ ಶ್ವೇತಭವನದಿಂದ ತೆರಳಿದ್ದಾರೆ.
ವರದಿಗಾರ್ತಿ ಕೇಳಿದ್ದ ಪ್ರಶ್ನೆಗೆ ಸರಿಯಾದ ಉತ್ತರ ಸಿಗದಿದ್ದ ಸಂದರ್ಭ ಆಕೆ, ಸರ್, ಇದನ್ನು ನೀವು ನನಗೆ ಏಕೆ ಹೇಳುತ್ತೀರಿ ಎಂದರು. ನನಗೆ ನೀವು ಕಿರಿಕಿರಿ ಉಂಟು ಮಾಡುವ ಪ್ರಶ್ನೆಯನ್ನು ಕೇಳುತ್ತಿದ್ದೀರಿ. ಯಾರಾದರೂ ನನಗೆ ಕಿರಿಕಿರಿ ಉಂಟುಮಾಡುವ ಪ್ರಶ್ನೆ ಕೇಳಿದರೆ, ನನ್ನ ಉತ್ತರ ಇದೇ ರೀತಿ ಇರಲಿದೆ ಎಂದು ಮತ್ತೋರ್ವ ವರದಿಗಾರ್ತಿಗೆ ಪ್ರಶ್ನೆ ಕೇಳಲು ಸೂಚನೆ ನೀಡಿದರು.
ಈ ನಡುವೆ ಅದೇ ವರದಿಗಾರ್ತಿ ವೀಜಿಯಾ ಜಿಯಾಂಗ್, ಪುನಃ ತನ್ನ ಪ್ರಶ್ನೆಗೆ ಉತ್ತರಿಸುವಂತೆ ಕೇಳಿದಾಗ ಕೋಪಗೊಂಡ ಟ್ರಂಪ್, ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಲ್ಲಿಂದ ತೆರಳಿದರು. ಈ ಬಗ್ಗೆ ಜಿಯಾಂಗ್ ಅವರು ಟ್ವೀಟರ್ನಲ್ಲಿ ತಮ್ಮನ್ನು, ಚೀನಾ ಮೂಲದ ವೆಸ್ಟ್ ವರ್ಜೀನಿಯನ್ ಎಂದು ಪರಿಚಯಿಸಿಕೊಂಡಿದ್ದಾರೆ.
ಚೀನಾದ ಹ್ಯಾಕರ್ಸ್ ಗಳು ಅಮೆರಿಕ ನಡೆಸುತ್ತಿರುವ ಲಸಿಕೆಯ ಸಂಶೋಧನೆಗಳನ್ನು ಕದಿಯಲು ಯತ್ನಿಸುತ್ತಿದ್ದಾರೆ ಎಂಬುದಾಗಿ ಅಲ್ಲಿನ ತನಿಖಾ ಸಂಸ್ಥೆಗಳು ನಂಬಿವೆ. ಈ ಮಾಹಿತಿಯನ್ನು ಯುಎಸ್ ಫೆಡೆರಲ್ ಬ್ಯುರೊ ಆಫ್ ಇನ್ವೆಸ್ಟಿಗೇಶನ್ ಹಾಗೂ ಸೈಬರ್ ಸೆಕ್ಯುರಿಟಿ ತಜ್ಞರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ತಿಳಿಸಿದ್ದಾರೆ.
ಸುದ್ದಿಸಂಸ್ಥೆಗಳ ವರದಿ ಪ್ರಕಾರ, ಕೊರೊನಾ ಪರೀಕ್ಷೆ ಹಾಗೂ ಕೊರೊನಾ ಚಿಕಿತ್ಸೆಗಳ ಬಗ್ಗೆ ಬೌದ್ದಿಕ ಆಸ್ತಿಯನ್ನು ಚೀನಾ ಗುರಿಯಾಗಿಸಿಕೊಂಡಿದ್ದು, ಈ ದುಷ್ಕೃತ್ಯಕ್ಕೆ ಇರಾನ್, ರಷ್ಯಾ, ಚೀನಾ ಹಾಗೂ ಉತ್ತರ ಕೊರಿಯಾಗಳಲ್ಲಿರುವ ಚೀನೀ ಹ್ಯಾಕರ್ಗಳು ಸಂಚು ನಡೆಸಿದ್ದಾರೆ ಎಂದು ತಿಳಿಸಿದೆ. ಅಲ್ಲದೇ, ಇದೇ ಸಂದರ್ಭ ಪುನಃ ಚೀನಾದೊಂದಿಗೆ ವ್ಯಾಪಾರವನ್ನು ಆರಂಭಿಸಲು ಮುಂದಾಗಿದೆ ಎನ್ನುವ ಸುದ್ದಿಯನ್ನು ಟ್ರಂಪ್ ತಳ್ಳಿಹಾಕಿದ್ದಾರೆ.