ಲಾಹೋರ್, ಮೇ 13 (Daijiworld News/MB) : ಭಾರತದ ಮೇಲೆ ತಕ್ಷಣ ಸೇನಾ ದಾಳಿ ಮಾಡಿ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಲ್ಲಿ ಆಗ್ರಹಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಸೇರಿಸಿಕೊಂಡು ಭಾರತೀಯ ಹವಾಮಾನ ಇಲಾಖೆ ಹವಾಮಾನ ವರದಿ ಪ್ರಕಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಜಾ ಫಾರೂಕ್ ಹೈದರ್, ಪಿಒಕೆ ಭಾರತದ್ದು ಎಂಬಂತೆ ಬಿಂಬಿಸಲು ಈ ಹವಾಮಾನ ವರದಿ ಪ್ರಕಟ ಮಾಡಲಾಗಿದೆ. ಭಾರತದ ಈ ಉದ್ಧಟತನದ ವರ್ತನೆಗೆ ತಕ್ಕ ಶಾಸ್ತಿ ಮಾಡಬೇಕು. ಹಾಗಾಗಿ ತಕ್ಷಣ ಭಾರತದ ಮೇಲೆ ಸೇನಾ ದಾಳಿ ನಡೆಸಿ. ಕೇವಲ ಮೌಖಿಕ ಹೇಳಿಕೆ ಸಾಕಾಗುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ನ್ನು ಒತ್ತಾಯಿಸಿದ್ದಾರೆ.
ಪಿಒಕೆ ಪ್ರಧಾನಿ ರಾಜಾ ಫಾರೂಕ್ ಹೈದರ್ ಅವರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲ್ಲಿದ್ದು ಈ ಹಿಂದೆ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಕಾರ್ಯಾಚರಣೆ ನಿರಂತರವಾಗಿರಬೇಕು. ಆಗ ಪಿಒಕೆ ನೆಮ್ಮದಿಯಾಗಿರುತ್ತದೆ ಎಂದು ಹೇಳಿದ್ದರು.