ವಿಶ್ವಸಂಸ್ಥೆ, ಮೇ 14 (DaijiworldNews/PY) : ಕೊರೊನಾ ಸೃಷ್ಠಿ ಮಾಡಿರುವ ಅವಾಂತರವು ಜಾಗತಿಕವಾಗಿ ಹೆಚ್ಚು ಜನರ ಮೇಲೆ ಭಾರಿ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ ಎಂದು ಗುರುವಾರ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಕೊರೊನಾ ಸೋಂಕಿನಿಂದ ಉಂಟಾಗುವ ವಿನಾಶಕಾರಿಯಾದ ಮಾನಸಿಕ ತೊಂದರೆಗಳನ್ನು ಪರಿಹಾರ ಮಾಡಲು ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ತನ್ನ ಸದಸ್ಯ ರಾಷ್ಟ್ರಗಳಿಗೆ ಒತ್ತಾಯ ಮಾಡಿದೆ.
ಕೊರೊನಾ ಸೋಂಕು ಹರಡುತ್ತಿದ್ದ ಮೊದಲ ಕೆಲ ತಿಂಗಳುಗಳ ಸಂದರ್ಭದಲ್ಲಿ ಜನರ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಕಾಳಜಿಯಾಗಿತ್ತು. ಆದರೆ, ಕೊರೊನಾ ಉಂಟುಮಾಡಿರುವ ಅವಾಂತರವು ಜಾಗತಿಕವಾಗಿ ಹೆಚ್ಚು ಜನರ ಮೇಲೆ ಭಾರೀ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.
ನಾವು ದಶಕಗಳಿಂದ ಮಾನಸಿಕ ಆರೋಗ್ಯ ಸೇವೆಗಳನ್ನು ನಿರ್ಲಕ್ಷಿಸಿದ್ದು ಹಾಗೂ ಆ ಸೇವಗಳಲ್ಲಿ ಕಡಿಮೆ ಹೂಡಿಕೆಯನ್ನು ಮಾಡಿದ್ದೇವೆ. ಕೊರೊನಾದಿಂದಾಗಿ ಈಗ ಕುಟುಂಬ ಹಾಗೂ ಸಮುದಾಯಗಳು ಹೆಚ್ಚಾಗಿ ಮಾನಸಿಕ ಒತ್ತಡಿದಿಂದ ಬಳಲುತ್ತಿವೆ ಎಂಬುದಾಗಿ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತಿಳಿಸಿದ್ದಾರೆ.
ಮಹಾಮಾರಿ ಕೊರೊನಾ ರೋಗವನ್ನು ನಿಯಂತ್ರಣಕ್ಕೆ ತಂದ ಬಳಿಕವೂ, ಆತಂಕ, ದುಃಖ, ಖಿನ್ನತೆ ಜನರ ಹಾಗೂ ಸಮುದಾಯಗಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದಿದ್ದಾರೆ.
ಕೊರೊನಾ ಉಂಟು ಮಾಡಿರುವ ಈ ಅವಾಂತರದಿಂದಾಗಿ ಜೀವನೋಪಾಯ ಕಳೆದುಕೊಳ್ಳುವ, ಪ್ರೀತಿ ಪಾತ್ರರಿಂದ ದೂರವಾಗುವ ಭೀತಿಯಲ್ಲಿರುವ ಜನರು ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗಲಿದ್ದಾರೆ ಎಂದು ವಿವರಿಸಿದ್ದಾರೆ.