ಬೀಜಿಂಗ್, ಮೇ 15 (DaijiworldNews/PY) : ಎರಡನೇ ಬಾರಿ ಚೀನಾದಲ್ಲಿ ಕೊರೊನಾ ಸೋಂಕು ವ್ಯಾಪಿಸುವ ಭೀತಿಯ ಮಧ್ಯೆ ವುಹಾನ್ನಲ್ಲಿ ಬುಧವಾರದಿಂದಲೇ 11 ಲಕ್ಷ ಜನರ ಸಾಮೂಹಿಕ ಸೋಂಕು ಪತ್ತೆ ಪರೀಕ್ಷೆ ಪ್ರಾರಂಭವಾಗಿದೆ. ಈ ಪರೀಕ್ಷೆ ಮೇ 20ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಚೀನಾದಲ್ಲಿ ಸದ್ಯ ಕೊರೊನಾ ಪಿಡುಗು ನಿಯಂತ್ರಣದಲ್ಲಿದ್ದರೂ, ವಿರಳ ಪ್ರಕರಣಗಳಿಂದ ಸಾಮೂಹಿಕ ಸೋಂಕು ಹರಡುವ ಅಪಾಯವಿದೆ ಎಂದು ಪ್ರಮುಖ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮಧ್ಯೆ ಚೀನಾದಲ್ಲಿ ಲಕ್ಷಣ ರಹಿತವಾದ ಸೋಂಕು ಇರುವ 12 ಪ್ರಕರಣಗಳು ಸೇರಿದಂತೆ ಹೊಸದಾಗಿ ಒಟ್ಟು 15 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಲಿಯಾಂಗ್ ಪ್ರಾಂತ್ಯದಲ್ಲಿ ಎರಡು ಹಾಗೂ ಜಿಲಿನ್ ಪ್ರಾಂತ್ಯದಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಇಲ್ಲಿ ಸೋಂಕು ಪರಿಚಿತರಿಂದಲೇ ತಗುಲಿದೆ. ದೇಶದಲ್ಲಿ ಬುಧವಾರದ ವೇಳೆಗೆ ಸೋಂಕು ದೃಢಪಟ್ಟ 82,929 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 101 ಮಂದಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 4,663 ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಲಕ್ಷಣರಹಿತ ಸೋಂಕು ಇರುವ ಸುಮಾರು 712 ಮಂದಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು, ಈ ಪೈಕಿ ಸುಮಾರು 574 ಜನರು ಹ್ಯುಬೆ ಹಾಗೂ ವುಹಾನ್ನವರು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದಲ್ಲಿ 21 ಪ್ರಕರಣಗಳು ವರದಿಯಾಗಿದ್ದು, ಈಪೈಕಿ ಎರಡು ಪ್ರಕರಣಗಳಲ್ಲಿ ಲಕ್ಷಣರಹಿತ ಸೋಂಕು ದೃಢಪಟ್ಟಿದೆ. ಹಾಗಾಗಿ ಅಧಿಕಾರಿಗಳು ಸೋಂಕು ವ್ಯಾಪಿಸುವುದನ್ನು ನಿಯಂತ್ರಣ ಮಾಡಲು ಹೆಚ್ಚು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಉಪಮೇಯರ್ ಗೈ ಡಾಂಗ್ಪಿಂಗ್ ಹೇಳಿದ್ದಾರೆ.