ಜಿನೆವಾ, ಮೇ 17 (DaijiworldNews/PY) : ಬೀದಿಗಳಲ್ಲಿ ಸೋಂಕು ನಿವಾರಕವನ್ನು ಸಿಂಪಡಣೆ ಮಾಡುವುದರಿಂದ ಕೊರೊನಾ ವೈರಸ್ನಿಂದ ಮುಕ್ತಿಯಾಗಲು ಸಾಧ್ಯವಿಲ್ಲ. ಅದಕ್ಕೆ ಬದಲಾಗಿ ಅದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ವೈರಸ್ ನಿವಾರಣೆ ಮಾಡಲೆಂದೇ ಸ್ವಚ್ಛ ಮಾಡುವ ಸಂದರ್ಭ ಸೋಂಕು ನಿವಾರಕವನ್ನು ಸಿಂಪಡಣೆ ಮಾಡುವುದು ಪರಿಣಾಮಕಾರಿಯಾಗುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಬೀದಿಗಳು ಅಥವಾ ಮಾರುಕಟ್ಟೆಯಂತಹ ಹೊರಾಂಗಣ ಪ್ರದೇಶಗಳಲ್ಲಿ ಕೊರೊನಾ ಅಥವಾ ಇತರ ರೋಗಕಾಋಕಗಳನ್ನು ಕೊಲ್ಲಲು ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲು ಶಿಫಾರಸು ಮಾಡುವುದಿಲ್ಲ. ಏಕೆಂದರೆ, ಸೋಂಕು ನಿವಾರಕವನ್ನು ಸಿಂಪಡಣೆ ಮಾಡಿದ ನಂತರ ಅಲ್ಲಿರುವ ಕೊಳಕು ಹಾಗೂ ಇತರೆ ಅವಶೇಷಗಳನ್ನು ಸೋಂಕು ನಿವಾರಕವೇ ನಿಷ್ಕ್ರಿಯಗೊಳ್ಳುವಂತೆ ಮಾಡುತ್ತವೆ.
ವೈರಸ್ ಅನ್ನು ನಾಶಪಡಿಸಲು ಬೇಕಾಗಿರುವ ಸಮಯದವರೆಗೆ ಎಲ್ಲಾ ಜಾಗದಲ್ಲಿಯೂ ಸಮರ್ಪಕವಾಗಿ ರಾಸಾಯನಿಕ ಸಿಂಪಡಿಸುವಿಕೆಯು ಹರಡುವ ಸಾಧ್ಯತೆಯಿಲ್ಲ. ಪಾದಾಚಾರಿ ಮಾರ್ಗಗಳು ಹಾಗೂ ಬೀದಿಗಳು ಸೋಂಕಿನ ಮೂಲಗಳು ಅಲ್ಲವಾಗಿರುವ ಕಾರಣ ಸೋಂಕುನಿವಾರಕಗಳನ್ನು ಹೊರಗಡೆ ಸಿಂಪಡಣೆ ಮಾಡುವುದು ಕೂಡಾ ಮಾನವನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ತಿಳಿಸಿದೆ.
ಸೋಂಕು ನಿವಾರಕವನ್ನು ಯಾವುದೇ ವ್ಯಕ್ತಿಯ ಮೇಲೆ ಸಿಂಪಡಿಸಿವುದನ್ನು ಶಿಫಾರಸು ಮಾಡುವುದಿಲ್ಲ. ಸೋಂಕು ನಿವಾರಕ ಸಿಂಪಡಣೆಯು ಮಾನಸಿಕ ಹಾಗೂ ದೈಹಿಕವಾಗಿಯೂ ಹಾನಿಯುಂಟು ಮಾಡಬಹುದು. ಆದರೆ, ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ವೈರಸ್ ಹರಡುವ ಸಾಮರ್ಥ್ಯವನ್ನು ಕಡಿಮೆಗೊಳಿಸುವುದಿಲ್ಲ ಎಂದು ಹೇಳಿದೆ.
ಕ್ಲೋರಿನ್ ಅಥವಾ ಇತರ ವಿಷಕಾರಿ ರಾಸಾಯನಿಕಗಳನ್ನು ಜನರ ಮೇಲೆ ಸಿಂಪಡಿಸುವುದರಿಂದ ಚರ್ಮದ ತೊಂದರೆ, ಬ್ರಾಂಕೋಸ್ಪಾಸ್ಮ್, ಕಣ್ಣು ಹಾಗೂ ಜಠರ-ಕರುಳಿನ ಮೇಲೆ ಪರಿಣಾಮ ಉಂಟಾಗುತ್ತೆ. ಸೋಂಕು ನಿವಾರಕಗಳನ್ನು ಒಂದು ವೇಳೆ ಸಿಂಪಡಣೆ ಮಾಡಲೇಬೇಕೆಂದರೆ, ಸೋಂಕು ನಿವಾರಕದಲ್ಲಿ ನೆನೆಸಿದ ಬಟ್ಟೆಯಿಂದ ಆ ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಎಂದಿದೆ.
ಚೀನಾದಿಂದ ಕಳೆದ ಡಿಸೆಂಬರ್ನಲ್ಲಿ ಹಬ್ಬಿದ ಮಹಾಮಾರಿ ಕೊರೊನಾದಿಂದಾಗಿ ವಿಶ್ವದಾದ್ಯಂತ ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.