ವಾಷಿಂಗ್ಟನ್, ಮೇ 17 (Daijiworld News/MB) : ಕೊರೊನಾಗೆ ತಂಬಾಕು ಎಲೆಗಳಿಂದಲ್ಲೇ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಮಾನವನ ಮೇಲೆ ಪ್ರಯೋಗಕ್ಕೆ ಸಿದ್ಧವಿದೆ ಎಂದು ಸಿಗರೇಟ್ ತಯಾರಿಕಾ ಕಂಪನಿ "ಬ್ರಿಟಿಷ್ ಅಮೆರಿಕನ್ ಟೊಬಾಕೊ" ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ತಿಂಗಳು ಈ ಕಂಪೆನಿ ತಂಬಾಕು ಎಲೆಗಳಿಂದ ಕೊರೊನಾಗೆ ಲಸಿಕೆ ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದ್ದು ಇದೀಗ ಲಸಿಕೆ ಮಾನವ ಪ್ರಯೋಗಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದೆ.
ಕ್ಲಿನಿಕಲ್ ಟ್ರಯಲ್ಗೂ ಮೊದಲಿನ ಪ್ರಯೋಗದಲ್ಲಿ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಸಕಾರಾತ್ಮಕ ಪ್ರತಿರೋಧ ಪ್ರಕ್ರಿಯೆ ಉಂಟುಮಾಡಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತದಿಂದ (ಎಫ್ಡಿಎ) ಅನುಮತಿ ದೊರೆತ ಕೂಡಲೇ ಮೊದಲ ಹಂತದ ಮಾನವ ಪ್ರಯೋಗ ಆರಂಭಿಸಲಾಗುವುದು ಎಂದು ಕಂಪನಿ ಹೇಳಿದೆ.
ಶುಕ್ರವಾರವೇ ಲಸಿಕೆಯ ಮಾನವ ಪ್ರಯೋಗ ಮಾಡಲು ಎಫ್ಡಿಎಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಹಾಗೆಯೇ ವಿಶ್ವದ ವಿವಿಧ ರಾಷ್ಟ್ರಗಳ ಅನುಮತಿಯನ್ನೂ ಕೋರಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಲಸಿಕೆಯ ಸಂಶೋಧನೆ ನಡೆಯುತ್ತಲ್ಲೇ ಇದ್ದು ಈಗಾಗಲೇ ಈ ಲಸಿಕೆ ತಯಾರಿಕೆಗೆ 12ರಿಂದ 18 ತಿಂಗಳುಗಳೇ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.