ಶಾರ್ಜಾ, ಮೇ 18 (Daijiworld News/MB) : ಶಾರ್ಜಾದ ಸೇಂಟ್ ಮೈಕೆಲ್ ಚರ್ಚ್ನಲ್ಲಿ ಅರೇಬಿಕ್ ಮಾತನಾಡುವ ಸಮುದಾಯದ ಸಹಾಯಕ ಪ್ಯಾರಿಷ್ ಪಾದ್ರಿಯಾಗಿದ್ದ ಫಾ. ಯೂಸೆಫ್ ಸಾಮಿ ಯೂಸೆಫ್ ಒಎಫ್ಎಂ ಕ್ಯಾಪ್ (62) ಮೇ 18 ರ ಭಾನುವಾರ ಜ್ಮಾನ್ನ ಶೇಖ್ ಖಲೀಫಾ ವೈದ್ಯಕೀಯ ನಗರದಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ಅರೇಬಿಯಾದ ಅಪೋಸ್ಟೋಲಿಕ್ ವಿಕಾರಿಯೇಟ್ (ಎವಿಒಎಸ್ಎ) ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಸುಮಾರು ಮೂರು ವಾರಗಳಿಂದ ಫಾ. ಯೂಸೆಫ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗಾಗಲೇ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಇವರಿಗೆ ಅಂಗಾಂಗ ವೈಫಲ್ಯ ಉಂಟಾಗಿದೆ.
ಫಾ. ಯೂಸೆಫ್ ಅವರು 1993 ರಿಂದ ಗಲ್ಫ್ ರಾಷ್ಟ್ರಗಳಲ್ಲಿ ಮಿಷನರಿ ಆಗಿದ್ದು, ಸೇಂಟ್ ಮೇರಿಸ್ ಚರ್ಚ್ ದುಬೈ (1993-1995), ಅವರ್ ಲೇಡಿ ಆಫ್ ದಿ ರೋಸರಿ ಚರ್ಚ್ ದೋಹಾ (2004-2008), ಸೇಕ್ರೆಡ್ ಹಾರ್ಟ್ ಚರ್ಚ್, ಮನಾಮಾ (2008-2011), ಸೇಂಟ್ ಜೋಸೆಫ್ ಕ್ಯಾಥೆಡ್ರಲ್ ಅಬುಧಾಬಿ (2011-2015), ಹೋಲಿ ಸ್ಪಿರಿಟ್ ಚರ್ಚ್, ಘಾಲಾ ಮತ್ತು ಸೇಂಟ್ ಮೇರಿಸ್ ಚರ್ಚ್ ಅಲ್ ಐನ್ (2016) ಅರೇಬಿಕ್ ಮತ್ತು ಫ್ರೆಂಚ್ ಮಾತನಾಡುವ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದ್ದರು. 2016 ರಿಂದ ಶಾರ್ಜಾದ ಸೆಂಟ್ ಮೈಕೆಲ್ಸ್ ಚರ್ಚ್ನಲ್ಲಿ ನೆಲೆಸಿದ್ದರು.
1957 ರ ನವೆಂಬರ್ 18 ರಂದು ಸಿಡಾನ್ನ ಮರೋನೈಟ್ ಡಯಾಸಿಸ್ನ ಡೀರ್ ಡೌರಿಟ್ನಲ್ಲಿ ಫಾ. ಯೂಸೆಫ್ ಅವರು ಜನಿಸಿದ್ದು ಬಳಿಕ ಸಮೀಪದ ಆರ್ಡರ್ ಆಫ್ ಫ್ರಿಯರ್ಸ್ ಮೈನರ್ ಕ್ಯಾಪುಚಿನ್ (ಒಎಫ್ಎಂ ಕ್ಯಾಪ್)ಗೆ ಸೇರಿಕೊಂಡು 1977 ರ ಅಕ್ಟೋಬರ್ 4ರಂದು ಅದನ್ನೇ ತನ್ನ ವೃತ್ತಿ ಜೀವನವನ್ನಾಗಿ ಸ್ವೀಕರಿಸಿದರು. ಪಾಂಟಿಫಿಕಲ್ ಹೋಲಿ ಸ್ಪಿರಿಟ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರದ ಬಗ್ಗೆ ಅಧ್ಯಯನ ಪೂರ್ಣಗೊಳಿಸಿದ ಬಳಿಕ ಅವರನ್ನು 1988 ಜುಲೈ 2ರಂದು ಪಾದ್ರಿಯನ್ನಾಗಿ ನೇಮಿಸಲಾಯಿತು.
ಅವರು ಬಿಷಪ್ ಕೌನ್ಸಿಲ್ (2011-2020) ಮತ್ತು ಅರೇಬಿಯಾದ ಕ್ಯಾಪುಚಿನ್ ಕಸ್ಟಡಿ ಕೌನ್ಸಿಲ್ನ ಸದಸ್ಯರಾಗಿದ್ದರು.
ಯೂಸೆಫ್ ಅವರ ಅಂತ್ಯಕ್ರಿಯೆಯ ಕುರಿತಾಗಿ ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ತಿಳಿಸಿದೆ.