ವಾಷಿಂಗ್ಟನ್, ಮೇ 19 (Daijiworld News/MSP): ವಿಶ್ವವನ್ನೇ ತನ್ನ ಕಬಂಧಬಾಹುಗಳಲ್ಲಿ ಬಂಧಿಸಿದ ಕೊರೊನಾ ವೈರಸ್ ವಿರುದ್ದದ ಪ್ರತಿರೋಧ ಶಕ್ತಿ ಹೆಚ್ಚಿಸುವ ಮೊಟ್ಟಮೊದಲ ಲಸಿಕೆ ಮಾನವರ ಮೇಲೆ ಪ್ರಯೋಗಕ್ಕೆ ಸಿದ್ದವಾಗಿದೆ ಎಂದು ಔಷಧ ತಯಾರಕ ಕಂಪನಿ ಮಾಡೆರ್ನಾ ಹೇಳಿಕೊಂಡಿದೆ.
ಇದುವರೆಗೆ ಎಂಟು ಮಂದಿಯ ಮೇಲೆ ಇದನ್ನು ಈ ಕೊರೊನಾ ವಿರುದ್ದದ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು, ಮಾರ್ಚ್ನಿಂದ ಆರಂಭಿಸಿ ಇವರು ತಲಾ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಮೊದಲ ಬಾರಿಗೆ ಮಾನವರ ಮೇಲೆ ಪ್ರಯೋಗಿಸಿದ ಲಸಿಕೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ ಎಂದು ಹೇಳಿಕೊಂಡಿದೆ. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಕಂಪನಿಯ ಷೇರುಗಳ ಮೌಲ್ಯ ಶೇ.40 ಏರಿಕೆ ಕಂಡಿದೆ.
ವೈರಸ್ ಪುನರುತ್ಪತ್ತಿಯನ್ನು ತಡೆಯುವ ನಿರೋಧಕ ಶಕ್ತಿ ವೃದ್ದಿ ಈ ಲಸಿಕೆ ಗುಣವಾಗಿದ್ದು, ಇದು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ತಿಳಿದುಬಂದಿದೆ. ಪ್ರಯೋಗಿಕವಾಗಿ ೮ ಮಂದಿ ಲಸಿಕೆ ಪಡೆದವರು ಆರೋಗ್ಯವಂತರಾಗಿದ್ದರು. ಅವರಿಗೆ ಲಸಿಕೆ ನೀಡಿದ ಬಳಿಕ ಅವರ ದೇಹದಲ್ಲಿ ಉಂಟಾದ ಪ್ರತಿಕಾಯಗಳನ್ನು ಬಳಸಿ ಕರೊನಾಪೀಡಿತ ಜೀವಕೋಶಗಳ ಮೇಲೆ ಪರೀಕ್ಷೆ ನಡೆಸಲಾಯಿತು. ಇದು ಕರೊನಾ ವೈರಸ್ ವೃದ್ಧಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಲಸಿಕೆ ತಯಾರಿಕೆಗೆ ಬೇಕಾದ ಮಹತ್ವದ ಘಟ್ಟವನ್ನು ನಾವು ತಲುಪಿದ್ದೇವೆ ಎಂದು ಕಂಪನಿ ತಿಳಿಸಿದೆ.
ಇದೀಗ ಎರಡನೇ ಹಂತದಲ್ಲಿ 600 ಮಂದಿಗೆ ಈ ಲಸಿಕೆ ನೀಡಿ ಫಲಿತಾಂಶ ಅಧ್ಯಯನ ಮಾಡುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದು ಮಾಡೆರ್ನಾ ಹೇಳಿದೆ. ನಂತರ ಸಾವಿರಾರು ಜನರ ಮೇಲೆ ಪ್ರಯೋಗಿಸಲಾಗುವ ಮೂರನೇ ಹಂತದ ಪರೀಕ್ಷೆ ಜುಲೈನಲ್ಲಿ ನಡೆಯಲಿದೆ. ಎರಡನೇ ಹಂತದ ಪ್ರಯೋಗಕ್ಕೆ ಎಫ್ಡಿಎ ಅನುಮತಿ ನೀಡಿದೆ ಎಂದು ಮಾಡೆರ್ನಾ ಸ್ಪಷ್ಟಪಡಿಸಿದೆ
ಮೊದಲ ಹಂತದ ಪರೀಕ್ಷೆಯಲ್ಲಿ ಡೋಸ್ ಗಳನ್ನು ಕಡಿಮೆ, ಮಧ್ಯಮ ಹಾಗೂ ಅತ್ಯಧಿಕ ಪ್ರಮಾಣದಲ್ಲಿ ಲಸಿಕೆ ನೀಡಲಾಗಿತ್ತು. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಲಸಿಕೆ ಪಡೆದವರಲ್ಲಿ ಈ ಫಲಿತಾಂಶ ಕಂಡುಬಂದಿದೆ. ಅತ್ಯಧಿಕ ಪ್ರಮಾಣದಲ್ಲಿ ಲಸಿಕೆ ಪಡೆದವರಿಗೆ ಜ್ವರ, ತಲೆನೋವು, ಸ್ನಾಯು ಸೆಳೆತ ಉಂಟಾಗಿದೆ. ಹೀಗಾಗಿ ಕಮ್ಮಿ ಡೋಸ್ ಪರಿಣಾಮಕಾರಿಯಾಗುತ್ತಿರುವುದರಿಂದ ಮುಂದಿನ ಹಂತದಲ್ಲಿ ಜಾಸ್ತಿ ಡೋಸ್ ನೀಡುವುದನ್ನು ತಡೆಯಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ