ಬೀಜಿಂಗ್, ಮೇ 19 (Daijiworld News/MB) : ಲಸಿಕೆಯಿಲ್ಲದೆಯೇ ಕೊರೊನಾ ಸೋಂಕು ಗುಣಪಡಿಸುವ ಔಷಧಿಯೊಂದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಚೀನಾದ ಪ್ರಯೋಗಾಲಯವೊಂದು ಹೇಳಿದೆ.
ಈ ಔಷಧಿಯು ರೋಗ ನಿರೋಧಕ ಶಕ್ತಿಯನ್ನು ತಾತ್ಕಾಲಿಕವಾಗಿ ಸೃಷ್ಟಿ ಮಾಡಿ, ಸೋಂಕಿನಿಂದ ಬೇಗನೇ ಗುಣಮುಖರಾಗುವಂತೆ ಮಾಡುತ್ತದೆ. ಈಗಾಗಲೇ ಈ ಔಷಧಿಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು ಯಶಸ್ವಿಯಾಗಿದೆ. ವೈರಸ್ ಅನ್ನು ತಟಸ್ಥಗೊಳಿಸಬಲ್ಲ ಪ್ರತಿರೋಧಕ ಕಣಗಳುಳ್ಳ ಔಷಧಿಯನ್ನು ಇಲಿಗಳ ಮೇಳೆ ಪ್ರಯೋಗಿಸಿದ ಐದು ದಿನಗಳಲ್ಲಿ ಅವುಗಳಲ್ಲಿ ವೈರಸ್ಗಳ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ಚೀನಾದ ಬೀಜಿಂಗ್ನಲ್ಲಿರುವ ಅಡ್ವಾನ್ಸ್ ಇನೊವೇಷನ್ ಸೆಂಟರ್ ಫಾರ್ ಜೀನೋಮಿಕ್ಸ್’ನ ನಿರ್ದೇಶಕ ಸನ್ನಿ ಕ್ಸಿ ತಿಳಿಸಿದ್ದಾರೆ.
ಈ ಔಷಧಿಯನ್ನು ಸೋಂಕಿನಿಂದ ಗುಣಮುಖವಾದ 60 ಮಂದಿಯ ರಕ್ತದಿಂದ ಪ್ರತಿರೋಧಕ ಕಣಗಳನ್ನು ಪಡೆದು ಕ್ಸಿ ಅವರ ತಂಡ ಸಿದ್ಧಪಡಿಸಿದ್ದು ಪ್ರಾಣಿಯ ಮೇಲೆ ಪ್ರಯೋಗ ಮಾಡಿ ಯಶ್ವಸಿಯಾಗಿದೆ ಎಂದು ಹೇಳಿದ್ದಾರೆ.
2019 ರ ಡಿಸೆಂಬರ್ ತಿಂಗಳಲ್ಲಿ ಕೊರೊನಾ ವೈರಸ್ ಮೊದಲು ಚೀನಾದ ವುಹಾನ್ ನಗರದ ಮಾರುಕಟ್ಟೆಯಲ್ಲಿ ಪತ್ತೆಯಾಗಿದ್ದು ಇದೀಗ ವಿಶ್ವದಾದ್ಯಂತ ಹರಡಿದೆ. ಈಗ ಕೊರೊನಾಗೆ ಲಸಿಕೆ, ಔಷಧಿಗಳ ಸಂಶೋಧನೆ ನಡೆಯುತ್ತಿದೆ.