ಮಿಚಿಗನ್ , ಮೇ 22 (Daijiworld News/MSP): ಕೊರೊನಾ ವೈರಸ್ ವಿಚಾರದಲ್ಲಿ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಚೀನಾ ವಿರುದ್ಧ ಗುಟುರು ಹಾಕಿವೆ. ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ ಅಗ್ರ ಸ್ಥಾನದಲ್ಲಿದೆ. ಅತಿ ಹೆಚ್ಚು ಸಾವು ಮತ್ತು ಸೋಂಕಿನಿಂದ ತತ್ತರಿಸಿರುವ ಅಮೆರಿಕ, ಚೀನಾ ವಿರುದ್ಧ ಮತ್ತಷ್ಟು ಆಕ್ರೋಶಗೊಂಡಿದೆ.
'ಡೆಡ್ಲಿ ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಲು ಚೀನಾ ಕಾರಣ. ಇದನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ ಕಮ್ಯೂನಿಸ್ಟ್ ದೇಶದ ವಿರುದ್ಧ ಪ್ರತೀಕಾರ ಖಚಿತ ಎಂಬುದನ್ನು ಪುನರುಚ್ಚರಿಸಿದ್ದಾರೆ.
ಮಿಚಿಗನ್ ಪ್ರಾಂತ್ಯದಲ್ಲಿಅಫ್ರಿಕಾ ಮೂಲದ ಅಮೆರಿಕ ನಾಯಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದ ವೇಳೆ ಟ್ರಂಪ್, ಡ್ರ್ಯಾಗನ್ ರಾಷ್ಟ್ರ ವಿರುದ್ದ ಕೆಂಡಾಮಂಡಲರಾಗಿದ್ದು ಕೋವಿಡ್-19 ವೈರಸ್ ಬಂದಿರುವುದು ಚೀನಾದಿಂದಲೇ. ಇದರಲ್ಲಿ ಯಾವುದೇ ಅನುಮಾನ ಇಲ್ಲ.
ಇದರಿಂದ ನಮಗೆ ತುಂಬಾ ನೋವು ಮತ್ತು ಯಾತನೆಯಾಗಿದೆ. ಈಗ ನಡೆಸಿದ ಸಂವಾದ ಬಳಿಕ ಇದೀಗ ತಾನೆ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಸಹಿ ಮಾಡಿದ ಶಾಯಿ ಇನ್ನು ಒಣಗಿಲ್ಲ. ನಾವು ಚೀನಾ ಕಾರಣ ಎಂಬುವುದನ್ನು ಹಗುರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.
ಇದು ಕಮ್ಯೂನಿಸ್ಟ್ ದೇಶದ ವಿರುದ್ಧಅಮೆರಿಕದ ಸ್ಪಷ್ಟ ಪ್ರತೀಕಾರದ ಮುನ್ನೆಚ್ಚರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.