ಬ್ರೆಸಿಲಿಯಾ, ಮೇ 23 (Daijiworld News/MB) : ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ರಷ್ಯಾವನ್ನು ಹಿಂದಿಕ್ಕಿ ಬ್ರೆಜಿಲ್ ಎರಡನೇ ಸ್ಥಾನಕ್ಕೇರಿದ್ದು ಪ್ರಸ್ತುತ ಅಲ್ಲಿ ಸೋಂಕಿತರ ಸಂಖ್ಯೆ 3,30,890 ಕ್ಕೆ ಏರಿಕೆಯಾಗಿದೆ.
ರಷ್ಯಾದಲ್ಲಿ 3,26,448 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು 3,249 ಮಂದಿ ಸಾವನ್ನಪ್ಪಿದ್ದಾರೆ. ರಷ್ಯಾವನ್ನು ಹಿಂದಿಕ್ಕಿರುವ ಬ್ರೆಜಿಲ್ನಲ್ಲಿ ಒಟ್ಟು 3,30,890 ಸೋಂಕು ಪ್ರಕರಣಗಳ ಪೈಕಿ 21,048 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಬ್ರೆಜಿಲ್ನ ಅಧಿಕೃತ ಕೊರೊನಾ ಸೋಂಕಿತರ ಸಂಖ್ಯೆಗಿಂತ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವುದಾಗಿ ವರದಿಯಾಗಿದೆ.
ಸದ್ಯ ಬ್ರೆಜಿಲ್ನಲ್ಲಿ ಕೊರೊನಾದಿಂದಾಗಿ ಹೇರಲಾಗಿರುವ ನಿರ್ಬಂಧಗಳನ್ನು ಸಡಿಲಗೊಳಿಸುವುದೋ ಅಥವಾ ಇನ್ನಷ್ಟು ಕಠಿಣಗೊಳಿಸುವುದೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಇನ್ನು ವಿಶ್ವದಲ್ಲೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಅಮೆರಿಕದಲ್ಲಿ ಈವರೆಗೆ 16,01,434 ಮಂದಿಗೆ ಸೋಂಕು ತಗುಲಿದ್ದು 96,007 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.