ಕತಾರ್, ಮೇ 26 (DaijiworldNews/PY) : ಕತಾರ್ ದೇಶದಲ್ಲಿ ಜನರು ಕೊರೊನಾ ಆ್ಯಪ್ ಬಳಸುವುದು ಕಡ್ಡಾಯವಾಗಿದ್ದು, ತಜ್ಞರು ಇದರ ಕಾರ್ಯ ಕ್ಷಮತೆಯನ್ನು ಪ್ರಶ್ನಿಸಿದ್ದಾರೆ.
ಕೊರೊನಾಗೆ ಸಂಬಂಧಪಟ್ಟಂತೆ ಎಹತೆರಾಜ್ ಆ್ಯಪ್ನಲ್ಲಿ ಕೊರೊನಾ ಸೋಂಕಿತರನ್ನು ಗುರುತಿಸಲು ಸಾಧ್ಯವಿದ್ದು, ಅಧಿಕಾರಿಗಳು ಆ್ಯಪ್ನಲ್ಲಿ ಖಾಸಗಿತನಕ್ಕೆ ಧಕ್ಕೆ ತರುವ ಅಂಶಗಳ ನಿವಾರಣೆಗೆ ಶ್ರಮಿಸಿದ್ದಾರೆ.
ಮನೆಗಳಿಂದ ಹೊರಬರುವ ಸಂದರ್ಭ ಜನರು ಈ ಆ್ಯಪ್ ಅನ್ನು ತಮ್ಮ ಮೊಬೈಲ್ಗಳಲ್ಲಿ ಅಳವಡಿಸಿಕೊಳ್ಳಬೇಕಾದ್ದು ಕಡ್ಡಾಯವಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಪಡೆದುಕೊಳ್ಳು ಸಹಾಯವಾಗುತ್ತದೆ. ಈ ಆ್ಯಪ್ ಮೊಬೈಲ್ನಲ್ಲಿ ಇಲ್ಲದಿದ್ದರೆ 55 ಸಾವಿರ ಡಾಲರ್ ತನಕ ದಂಡ ಹಾಗೂ 3 ವರ್ಷಗಳ ಸೆರೆವಾಸ ವಿಧಿಸಲೂ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.
ಈ ಆ್ಯಪ್ ಬಳಕೆದಾರರ ಮೊಬೈಲ್ ಸ್ಟೋರೇಜ್ನ ಆ್ಯಕ್ಸೆಸ್ ಕೇಳುತ್ತಿದ್ದು, ಬಳಕೆದಾರರು ಇರುವ ಜಾಗವನ್ನು ಗುರುತಿಸಲು ಜಿಪಿಎಸ್ ಹಾಗೂ ಬ್ಲೂಟೂತ್ ಸದಾ ಆನ್ ಸ್ಥಿತಿಯಲ್ಲೇ ಇರಬೇಕು. ಹೀಗಾಗಿ, ಇಲ್ಲಿ ಖಾಸಗಿತನದ ಪ್ರಶ್ನೆ ಉದ್ಭವಿಸಿದೆ ಎಂದು ಕೆಲವರು ತಕರಾರು ಎತ್ತಿದ್ದಾರೆ.
ಆದರೆ, ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿರುತ್ತದೆ. ಅಗತ್ಯ ಸಂದರ್ಭಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಇದನ್ನು ನೋಡಬಲ್ಲರು. ಸಂಗ್ರಹಿಸಲಾಗಿರುವ ಯಾವುದೇ ಮಾಹಿತಿಗಳನ್ನು ಎರಡು ತಿಂಗಳಲ್ಲಿ ಕಡತದಿಂದ ತೆಗೆದುಹಾಕಲಾಗುತ್ತದೆ ಎಂದು ಕತಾರ್ನ ಸಾರ್ವಜನಿಕ ಆರೋಗ್ಯ ವಿಭಾಗದ ನಿರ್ದೇಶಕ ಡಾ| ಮೊಹಮ್ಮದ್ ಬಿನ್ ಹಮೀದ್ ಅಲಿ ತಾನಿ ತಿಳಿಸಿದ್ದಾರೆ.
ಈ ಆ್ಯಪ್ ಮೂಲಕ ಸೋಂಕು ಪತ್ತೆ ಅಷ್ಟೇನೂ ಪರಿಣಾಮಕಾರಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ದೇಶದಲ್ಲಿ ಇಲ್ಲಿಯವರೆಗೆ ಕೊರೊನಾದಿಂದ 23 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಪ್ರಮಾಣ ಮಾತ್ರ 40 ಸಾವಿರಕ್ಕೂ ಜಾಸ್ತಿ ಇದೆ.