ನವದೆಹಲಿ, ಮೇ 27 (Daijiworld News/MSP): ಜಗತ್ತಿನಾದ್ಯಂತ ಕೊವೀಡ್ ಹಾವಳಿ ಹೆಚ್ಚುತ್ತಿದೆ, ಇನ್ನೊಂದೆಡೆ ಲಾಕ್ ಡೌನ್ ಕಾರಣದಿಂದ ದೇಶ ವಿದೇಶದಲ್ಲಿ ತಮ್ಮೂರಿಗೆ ಹಿಂತಿರುಗಲಾಗದೆ ಜನರು ಅಲ್ಲಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಭಾರತದಲ್ಲಿ ಸಿಲುಕಿಕೊಂಡಿರುವ 176 ಮಂದಿ ಪಾಕಿಸ್ತಾನೀಯರು ಬುಧವಾರ ಅಟ್ಟಾರಿ-ವಾಘಾ ಗಡಿ ಮೂಲಕ ದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ಭಾರತದ ವಿದೇಶಾಂಗ ಕಚೇರಿ ತಿಳಿಸಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ವಿಶ್ವದ ಬೇರೆ ದೇಶಗಳಂತೆ ಭಾರತ ಕೂಡ ಲಾಕ್ ಡೌನ್ ಘೋಷಣೆ ಮಾಡಿತ್ತು. ಭಾರತ ಪಾಕಿಸ್ತಾನ ಗಡಿ ಅಟ್ಟಾರಿ-ವಾಘಾ ಗಡಿಭಾಗವನ್ನು ಕೂಡ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ 176 ಮಂದಿ ಪಾಕಿಸ್ತಾನೀಯರು ಭಾರತದ ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಇದೀಗ ಕಳೆದ ಮಾರ್ಚ್ 20ರಿಂದ ಅಟ್ಟಾರಿ-ವಾಘಾ ಗಡಿ ಮೂಲಕ 400ಕ್ಕೂ ಹೆಚ್ಚು ಪಾಕಿಸ್ತಾನೀಯರನ್ನು ಭಾರತದಿಂದ ವಾಪಾಸ್ ಕರೆಸಿಕೊಳ್ಳಲಾಗಿತ್ತು. ಪಾಕಿಸ್ತಾನ ಹೈ ಕಮಿಷನ್ ಭಾರತದ ಹೈ ಕಮಿಷನ್ ಜೊತೆಗೆ ಸಂಪರ್ಕ ಸಾಧಿಸಿ ಮತ್ತು ಪಾಕಿಸ್ತಾನದಲ್ಲಿರುವ ಬೇರೆ ಅಧಿಕಾರಿಗಳು, ವಿದೇಶಾಂಗ ಕಚೇರಿ ನೆರವಿನೊಂದಿಗೆ ಪಾಕಿಸ್ತಾನೀಯರನ್ನು ಕರೆಸಿಕೊಳ್ಳುತ್ತಿದೆ. ಕಳೆದ ಮಾರ್ಚ್ 20ರಿಂದ ಅಟ್ಟಾರಿ-ವಾಘಾ ಗಡಿ ಮೂಲಕ 400ಕ್ಕೂ ಹೆಚ್ಚು ಪಾಕಿಸ್ತಾನೀಯರನ್ನು ಭಾರತದಿಂದ ವಾಪಾಸ್ ಕರೆಸಿಕೊಳ್ಳಲಾಗಿತ್ತು.