ಬೀಜಿಂಗ್, ಮೇ 27 (Daijiworld News/MB) : ಕೊರೊನಾ ಸೋಂಕಿನ ಕುರಿತಾಗಿ ಸರಿಯಾಗಿ ಅಧ್ಯಯನವಾಗದಿದ್ದಲ್ಲಿ ಇಂತಹುದೇ ಸಾಂಕ್ರಾಮಿಕದ ಹುಟ್ಟು ಖಚಿತ ಎಂದು ಚೀನಾದ ಬಾವಲಿ ಮಹಿಳೆ ಎಂದೇ ಖ್ಯಾತಿ ಗಳಿಸಿರುವ ವೈರಸ್ ತಜ್ಞೆ ಶಿ ಝೇಂಗ್ಲಿ ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, ಕೊರೋನಾ ವೈರಸ್ ಪರ್ವತದ ಮೇಲಿನ ತುದಿಯಷ್ಟೇ. ಇಂತಹ ಲಕ್ಷಾಂತರ ವೈರಸ್ಗಳು ಇದ್ದು ಈ ಕುರಿತಾಗಿ ಸರಿಯಾದ ಅಧ್ಯಯನ ನಡೆಯದಿದ್ದಲ್ಲಿ ಭವಿಷ್ಯದಲ್ಲಿ ಭಾರೀ ವಿಪತ್ತು ಎದುರಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಕೊರೊನಾ ವುಹಾನ್ನ ಲಾಬ್ನಿಂದ ಬಂದಿದೆ ಎಂಬ ಅಮೆರಿಕಾದ ವಾದಕ್ಕೆ ತಿರುಗೇಟು ನೀಡಿದ ಅವರು, ನಾನು ಕೆಲಸ ಮಾಡಿದ ವೈರಸ್ಗಳ ಆನುವಂಶಿಕತೆಗೂ, ಸದ್ಯ ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ನ ಅನುವಂಶಿಕತೆಗೂ ತಾಳೆಯೇ ಇಲ್ಲ. ಅಮೆರಿಕಾದ ವಾದದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಯಾವುದೇ ಸಾಂಕ್ರಾಮಿಕ ರೋಗದ ವಿರುದ್ಧವಾಗಿ ಹೋರಾಡ ಬೇಕಾದ್ದಲ್ಲಿ ಅಂತರ್ರಾಷ್ಟ್ರೀಯ ಸಹಕಾರ ಅತೀ ಮುಖ್ಯ. ವೈರಸ್ಗಳ ಸಂಶೋಧನೆಯಲ್ಲಿ ವಿಜ್ಞಾನಿಗಳು ಮತ್ತು ಸರ್ಕಾರಗಳ ನಡುವೆ ಪಾರದರ್ಶಕತೆ ಮತ್ತು ಸಹಕಾರವಿರಬೇಕು. ಆದರೆ ವಿಜ್ಞಾನವನ್ನು ರಾಜಕೀಯಗೊಳಿಸುವುದು ವಿಷಾಧಾನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಈ ಮೊದಲು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದ ಅವರು, ಈಗಿನ ಕೊರೊನಾ ವೈರಸ್ ನನ್ನ ಲ್ಯಾಬ್ನಿಂದ ಹರಡಿಲ್ಲ. ಲ್ಯಾಬ್ಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ. ವುಹಾನ್ನ ಪ್ರಯೋಗಾಲಯದಿಂದ ವೈರಸ್ ತಪ್ಪಿಸಿಕೊಂಡಿದೆ ಎಂಬುದು ಶುದ್ಧ ಕಟ್ಟುಕಥೆ. ನಾನು ನನ್ನ ಜೀವನದ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ ಎಂದು ಹೇಳಿದ್ದರು.