ನ್ಯೂಯರ್ಕ್ ,ಮೇ 27 (Daijiworld News/MSP):ಕೊರೊನಾ ವೈರಸ್ ವಿಶ್ವಾದ್ಯಂತ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಂಡಿದ್ದು, ಮಹಾಮಾರಿಯ ಹಾವಳಿಯಿಂದ ಜಗತ್ತಿನ ಜನತೆ ತತ್ತರಿಸಿ ಹೋಗಿದ್ದಾರೆ. ಜಗತ್ತಿನಾದ್ಯಂತ ಈವರೆಗೆ ಡೆಡ್ಲಿ ಕೊರೊನಾ ಸುಮಾರು 3.52 ಲಕ್ಷ ಜನರನ್ನು ಬಲಿ ಪಡೆದಿದೆ. ಇದಲ್ಲದೆ ಈಗಾಗಲೇ ಸೋಂಕಿತರ ಸಂಖ್ಯೆ 56.89 ಲಕ್ಷ ದಾಟಿದೆ.
ಕಳೆದ 24 ತಾಸುಗಳಲ್ಲಿ ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ದೃಡಪಟ್ಟಿದೆ. ಕಳೆದ ಏಳು ದಿನಗಳಿಂದ ಜಗತ್ತಿನಾದ್ಯಂತ ಸರಾಸರಿ 1 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿದೆ. ಜಗತ್ತಿನಾದ್ಯಂತ ಈವರೆಗೆ 3,52,273 ಮಂದಿ ಸಾವಿಗೀಡಾಗಿದ್ದು, ಅಮೆರಿಕ ದೇಶವೊಂದರಲ್ಲೇ ಮೃತರ ಸಂಖ್ಯೆ 1,00,572ಕ್ಕೇರಿದೆ. ಈವರೆಗೆ ಅಮೇರಿಕಾದಲ್ಲಿ 17,25,275 ಮಂದಿಗೆ ಸೋಂಕು ತಗುಲಿದೆ.
ರೋಗ ಪೀಡಿತರಲ್ಲಿ ಸುಮಾರು 53,200ಕ್ಕೂ ಮಂದಿ ಸ್ಥಿತಿ ಗಂಭೀರವಾಗಿದೆ. ಈ ಮಧ್ಯೆ, ರೋಗಿಗಳ ಚೇತರಿಕೆ ಪ್ರಮಾಣದಲ್ಲಿಯೂ ವೃದ್ದಿ ಕಂಡುಬಂದಿವೆ. ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ಭಾರತದಲ್ಲಿ ಏರುತ್ತಿರುವ ಸೋಂಕು ಮತ್ತು ಸಾವಿನ ಸಂಖ್ಯೆ ಗಮನಿಸಿದರೆ ಶೀಘ್ರದಲ್ಲೇ ಏಳನೇ ಸ್ಥಾನಕ್ಕೇರುವ ಆತಂಕವಿದೆ.