ಕರಾಚಿ, ಮೇ 28 (Daijiworld News/MB) : ಕರಾಚಿಯಲ್ಲಿ ನಡೆದ ವಿಮಾನ ದುರಂತದಲ್ಲಿ ವಿಮಾನದ ಅವಶೇಷಗಳನ್ನೇನಾದರೂ ನಾಗರಿಕರ ಬಳಿ ಇದ್ದಲ್ಲಿ ಹಸ್ತಾಂತರ ಮಾಡಿ ಎಂದು ಪಾಕಿಸ್ತಾನ ವಿಮಾನ ಅಪಘಾತದ ತನಿಖಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.
ಪಾಕಿಸ್ತಾನದ ವಿಮಾನವು ಕಳೆದ ಶುಕ್ರವಾರ ಕರಾಚಿಯ ಜನವಸತಿ ಪ್ರದೇಶದಲ್ಲಿ ಪತನವಾಗಿದ್ದು ಈ ದುರಂತದಲ್ಲಿ 97 ಮಂದಿ ಸಾವನ್ನಪ್ಪಿದ್ದರು.
ಈ ಬಗ್ಗೆ ತನಿಖೆ ಕೈಗೊಂಡಿರುವ ಅಲ್ಲಿನ ಅಧಿಕಾರಿಗಳು, ಕಾಕ್ಪಿಟ್ ವಾಯ್ಸ್ ರೆಕಾರ್ಡರ್ಗಾಗಿ ಹುಡುಕಾಟ ನಡೆಸಿದ್ದು ಈವರೆಗೆ ಅದು ದೊರೆತಿಲ್ಲ. ವಿಮಾನವು ಜನವಸತಿ ಪ್ರದೇಶದ ಮೇಲೆ ಬಿದ್ದಿದ್ದು ಜನರು ಭಗ್ನಾವಶೇಷಗಳನ್ನು ತೆಗೆದಿರುವ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ಜನರು ಯಾವುದೇ ಅವಶೇಷವನ್ನು ತಮ್ಮ ಬಳಿ ಇರಿಸಿಕೊಂಡಿದ್ದಲ್ಲಿ ಕೂಡಲೇ ಹಸ್ತಾಂತರಿಸಿ ಎಂದು ಅಧಿಕಾರಿಗಳು ವಿನಂತಿ ಮಾಡಿದ್ದಾರೆ.
ಈಗಾಗಲೇ ವಿಮಾನದ ದತ್ತಾಂಶ ಸಂಗ್ರಹ ದೊರೆತಿದೆ. ಆದರೆ ಕಾಕ್ಪಿಟ್ ಸಂಭಾಷಣೆ ಈವರೆಗೂ ದೊರೆತಿಲ್ಲ.