ಆಕ್ಲೆಂಡ್, ಮೇ 30 (Daijiworld News/MB) : ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿದ್ದು ಈ ಸಂದರ್ಭದಲ್ಲೇ ನ್ಯೂಜಿಲ್ಯಾಂಡ್ನಲ್ಲಿ ಕೊನೆಯ ಕೊರೊನಾ ಸೋಂಕಿತ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನ್ಯೂಜಿಲ್ಯಾಂಡ್ ಈಗ ಮೊದಲ ಕೊರೊನಾ ಮುಕ್ತ ದೇಶವಾಗಿದೆ.
ನ್ಯೂಜಿಲ್ಯಾಂಡ್ ದೇಶದಲ್ಲಿ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿದ್ದು ಈ ನಡುವೆ ಕಳೆದ 8 ದಿನಗಳಿಂದ ಅಲ್ಲಿ ಒಂದೇ ಒಂದು ಹೊಸ ಪ್ರಕರಣವೂ ಪತ್ತೆಯಾಗಿಲ್ಲ. ಆದರೂ ನ್ಯೂಜಿಲ್ಯಾಂಡ್ನಲ್ಲಿ ಕೊರೊನಾ ಪರೀಕ್ಷೆಗಳು ನಡೆಸುತ್ತಲ್ಲೇ ಇದೆ ಎಂದು ವರದಿಯಾಗಿದೆ.
50 ಲಕ್ಷ ಜನಸಂಖ್ಯೆ ಇರುವ ನ್ಯೂಜಿಲ್ಯಾಂಡ್ನಲ್ಲಿ ಒಟ್ಟು 1504 ಕೊರೊನಾ ಪ್ರಕರಣಗಳು ದಾಖಲಾಗಿದ್ದು 22 ಮಂದಿ ಕೊರೊನಾ ಬಲಿಯಾದರೆ 1481 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ನ್ಯೂಜಿಲೆಂಡ್ನಲ್ಲಿ ಈವರಗೆ 2,78,872 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಫೆ.28ರಂದು ನ್ಯೂಜಿಲ್ಯಾಂಡ್ನಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದ್ದು ಕೂಡಲೇ ಅಲ್ಲಿನ ಪ್ರಧಾನಿ ಜೆಸ್ಸಿಂದ ಆರ್ಡೆರ್ನ್ ಸೋಂಕಿತರನ್ನು ಪತ್ತೆ ಹೆಚ್ಚುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆಯನ್ನು ರಚನೆ ಮಾಡಿದ್ದರು. ಮಾರ್ಚ್ 19 ರಂದು ದೇಶದ ಎಲ್ಲಾ ಗಡಿಗಳನ್ನು ಮುಚ್ಚಲಾಗಿದ್ದು ಮಾರ್ಚ್ 26ರಿಂದ ಸಂಪೂರ್ಣ ಲಾಕ್ಡೌನ್ ಜಾರಿಗೆ ತರಲಾಗಿತ್ತು. ಹಾಗೆಯೇ ಎನ್ಝೆಡ್ ಕೋವಿಡ್ ಟ್ರೇಸರ್ ಆಪ್ ಕೂಡಾ ಕಡ್ಡಾಯವಾಗಿ ಬಳಸುವಂತೆ ಆದೇಶಿಸಲಾಗಿತ್ತು.
ಪ್ರಸ್ತುತ ಯಾವುದೇ ಹೊಸ ಕೊರೊನಾ ಪ್ರಕರಣಗಳು ದಾಖಲಾಗದ ಕಾರಣದಿಂದಾಗಿ ಲಾಕ್ಡೌನ್ ಸಡಿಲಗೊಳಿಸಲಾಗಿದ್ದು ಸಾರ್ವಜನಿಕ ಸಮಾರಂಭದಲ್ಲಿ 100 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಹಾಗೆಯೇ ಆಸ್ಟ್ರೇಲಿಯಾಗೆ ಮಾತ್ರ ವಿಮಾನ ಪ್ರಯಾಣ ಮಾಡಲು ಅನುಮತಿ ನೀಡಲಾಗಿದ್ದು ಉಳಿದೆಲ್ಲೆಡೆ ಗಡಿ ಮುಚ್ಚಲಾಗಿದೆ.