ವಾಷಿಂಗ್ಟನ್, ಮೇ 31 (Daijiworld News/MB) : ಮುಂದಿನ ತಿಂಗಳು ಶ್ವೇತಭವನದಲ್ಲಿ ನಡೆಯಲಿದ್ದ ಜಿ7 ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ವರೆಗೆ ಮುಂದೂಡಿದ್ದು ಇದು ಹಳೆಯ ಗುಂಪು ಭಾರತವನ್ನೂ ಸೇರಿಸಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳಿಗೆ ಜಿ7 ಪ್ರತಿಕ್ರಿಯಿಸುತ್ತಿದೆ ಎಂದು ನನಗನಿಸುತ್ತಿಲ್ಲ. ಅದು ಹಳೆಯದಾದ ದೇಶಗಳ ಗುಂಪಾಗಿದ್ದು ಮುಂದೆ ನಡೆಯುವ ಶೃಂಗಸಭೆಗೆ ಭಾರತ ಸೇರಿದಂತೆ ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳನ್ನು ಸಹ ಆಹ್ವಾನಿಸಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕವು ಈ ವರ್ಷದ ಜಿ7 ಶೃಂಗಸಭೆಯ ಆತಿಥ್ಯ ವಹಿಸಲಿದ್ದು ಸಾಮಾನ್ಯವಾಗಿ ಪ್ರತಿವರ್ಷ ಈ ಶೃಂಗಸಭೆಗೆ ಅಧ್ಯಕ್ಷರು ಒಂದು ಅಥವಾ ಎರಡು ರಾಷ್ಟ್ರಗಳ ಮುಖ್ಯಸ್ಥರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸುತ್ತಾರೆ. ಕಳೆದ ವರ್ಷ ಫ್ರಾನ್ಸ್ನಲ್ಲಿ ನಡೆದ ಶೃಂಗ ಸಭೆಗೆ ಮೋದಿಯವರನ್ನು ವಿಶೇಷ ಅತಿಥಿಯಾಗಿ ಆಹ್ವಾನ ಮಾಡಲಾಗಿತ್ತು. ಇದೀಗ ಟ್ರಂಪ್ ಕೂಡಾ ಭಾರತವನ್ನು ಆಹ್ವಾನ ಮಾಡಲು ಯೋಜಿಸಿರುವುದಾಗಿ ಹೇಳಿದ್ದಾರೆ.
ವಿಶ್ವದ ಆರ್ಥಿಕವಾಗಿ ಪ್ರಬಲ ಹಾಗೂ ಬಲಿಷ್ಠ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಕೆನಡಾ ದೇಶಗಳನ್ನು ಒಟ್ಟು ಸೇರಿ ಜಿ7 ಶೃಂಗರಾಷ್ಟ್ರಗಳನ್ನಾಗಿ ರಚಿಸಲಾಗಿದ್ದು ವರ್ಷಕ್ಕೊಂದು ಬಾರಿ ಈ ದೇಶದ ಮುಖ್ಯಸ್ಥರು ಸಭೆ ಸೇರಿ ಅಂತರಾಷ್ಟ್ರೀಯ ಆರ್ಥಿಕತೆ ಮತ್ತು ವಿತ್ತೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ.