ಕಠ್ಮಂಡು, ಮೇ 31 (DaijiworldNews/PY) : ಭಾರತದ ಜೊತೆಗಿನ ಗಡಿ ವಿವಾದದ ನಡುವೆಯೇ ನೇಪಾಳ ಸರ್ಕಾರವು, ದೇಶದ ನಕ್ಷೆಯನ್ನು ಬದಲಾಯಿಸುವ ಉದ್ದೇಶದೊಂದಿಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಭಾನುವಾರ ಸಂಸತ್ತಿನಲ್ಲಿ ಮಂಡಿಸಿದೆ.
ನೇಪಾಳ ಸರ್ಕಾರದ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಿವಮಯ ತುಂಬಹಾಂಗ್ಪೆ ಅವರು ಮಸೂದೆಯನ್ನು ಮಂಡಿಸಿದ್ದು, ಅಲ್ಲಿನ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಶನಿವಾರ ಇದಕ್ಕೆ ಬೆಂಬಲ ಸೂಚಿಸಿತ್ತು.
ಇದು ನೇಪಾಳ ಸಂವಿಧಾನದ ಮೂರನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಆಡಳಿತಾತ್ಮಕ ನಕಾಶೆ ತಿದ್ದುಪಡಿಗೆ ಸಂಬಂಧಪಟ್ಟ ಮಸೂದೆಯಾಗಿದೆ. ಈ ಮಸೂದೆಗೆ ಅನುಮೋದನೆ ದೊರೆತು ಕಾನೂನಾಗಿ ರೂಪುಗೊಂಡರೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಪರಿಷ್ಕೃತ ನಕಾಶೆಯನ್ನುಉಪಯೋಗಿಸಲಾಗುತ್ತದೆ. ಮಸೂದೆ ಮೇಲೆ ಸದ್ಯ ಸಂಸತ್ತಿನಲ್ಲಿ ಚರ್ಚೆ ನಡೆಯಲಿದ್ದು, ಮಸೂದೆಗೆ ಉಭಯ ಸದನಗಳು ಅನುಮೋದನೆ ನೀಡಿದ ನಂತರ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಿಕೊಡಲಾಗುತ್ತದೆ.
ನೇಪಾಳ ಸರ್ಕಾರವು ಇತ್ತೀಚೆಗೆ ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಹಾಗೂ ಆಡಳಿತಾತ್ಮಕ ಪರಿಷ್ಕೃತ ನಕಾಶೆಯನ್ನು ಬಿಡುಗಡೆ ಮಾಡಿತ್ತು. ಆದರೆ, ಭಾರತ ಇದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದ್ದು, ಕೃತ್ರಿಮವಾಗಿ ಭೂಪ್ರದೇಶವನ್ನು ವಿಸ್ತರಣೆ ಮಾಡಿ ನಕಾಶೆಯನ್ನು ಸಿದ್ದಪಡಿಸುವ ಈ ಕ್ರಮ ನ್ಯಾಯವಾದುದಲ್ಲ. ಇಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದು ನೇಪಾಳಕ್ಕೆ ಸೂಚನೆ ನೀಡಿತ್ತು.
ಮಸೂದೆ ಮಂಡನೆಯು ಕಳೆದ ವಾರವೇ ಆಗಬೇಕಿತ್ತು. ಆದರೆ, ಮಸೂದೆಯನ್ನು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಮನವಿ ಮೇರೆಗೆ ಕೊನೇ ಕ್ಷಣದಲ್ಲಿ ಹಿಂದಕ್ಕೆ ಪಡೆಯಲಾಯಿತು. ಉನ್ನತ ಮಟ್ಟದ ಚರ್ಚೆ ಆಗಬೇಕೆಂದು ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಹೇಳಿದ ಕಾರಣ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ವಿಳಂಬವಾಗಿತ್ತು.
ಭಾರತದ ನಕ್ಷೆಯೊಳಕ್ಕೆ ಸೇರಿಕೊಂಡಿರುವ ಕಾಲಾಪಾನಿ ಹಾಗೂ ಲಿಪುಲೇಶ್ ಪ್ರದೇಶಗಳನ್ನು ಪುನಃ ಪಡೆಯುತ್ತೇನೆ ಎಂದು ಇತ್ತೀಚೆಗೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹೇಳಿದ್ದರು.