ವಾಷಿಂಗ್ಟನ್, ಜೂ 01 (DaijiworldNews/PY) : ಕೊರೊನಾ ಹಿನ್ನೆಲೆ ಜೂನ್ ಕೊನೆಯ ವಾರದಲ್ಲಿ ನಡೆಯಬೇಕಾಗಿದ್ದ ಜಿ-7 ರಾಷ್ಟ್ರಗಳ ಸಮಾವೇಶವನ್ನು ಸೆಪ್ಟೆಂಬರ್ಗೆ ಮುಂದೂಡಿಕೆ ಮಾಡುವುದಾಗಿಯೂ ಘೋಷಣೆ ಮಾಡಿದ್ದು, ಜಿ-7 ರಾಷ್ಟ್ರಗಳ ಒಕ್ಕೂಟಕ್ಕೆ ಭಾರತ ಸೇರ್ಪಡೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಮಾವೇಶವು ಸೆಪ್ಟೆಂಬರ್ನಲ್ಲಿ ನಡೆಯಲಿದ್ದು, ಸಮಾವೇಶಕ್ಕೆ ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಹಾಗೂ ಭಾರತವನ್ನು ಆಹ್ವಾನಿಸುವ ಇರಾದೆಯನ್ನು ಟ್ರಂಪ್ ಹೊಂದಿದ್ದಾರೆ. ಚೀನಾವನ್ನು ಇಂತಹ ಕ್ರಮದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹಣೆಯುವ ತಂತ್ರವೂ ಅವರದ್ದಾಗಿದೆ. ಇದರೊಂದಿಗೆ ನ.3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಗೆಲ್ಲುವ ಸಲುವಾಗಿಯೂ ಕೂಡ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಸದ್ಯ ಇರುವ ಗುಂಪು ಹಾಲಿ ವಿದ್ಯಾಮಾನಗಳಿಗೆ ಸೂಕ್ತವಾದ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ಅದನ್ನು ಜಿ-10, ಜಿ-11 ಎಂದು ಬದಲು ಮಾಡಬೇಕು ಹಾಗೂ ಭಾರತದೊಂದಿಗೆ ಇನ್ನೂ ಮೂರು ರಾಷ್ಟ್ರಗಳನ್ನು ಗುಂಪಿಗೆ ಸೇರಿಸಬೇಕು ಎಂದಿದ್ದಾರೆ. ಭಾರತ ಜಿ.20 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಸೆ.15ರಂದು ಶುರುವಾಗಲಿದೆ. ಅದಕ್ಕಿಂತ ಮುನ್ನ ಅಥವಾ ಬಳಿಕ ಜಿ-7 ರಾಷ್ಟ್ರಗಳ ಸಮ್ಮೇಳನ ನಡೆಯಲಿದೆ. ರಷ್ಯಾ 2014ರಲ್ಲಿ ಉಕ್ರೇನ್ನ ಭಾಗವಾಗಿರುವ ಕ್ರೀಮಾವನ್ನು ವಶಪಡಿಸಿಕೊಂಡ ಕಾರಣ ಜಿ-8 ರಾಷ್ಟ್ರಗಳ ಸಮ್ಮೇಳನಕ್ಕೆ ಆಹ್ವಾನ ನೀಡಲಾಗಿರಲಿಲ್ಲ. ಇದರೊಂದಿಗೆ ಜರ್ಮನಿ ಚಾನ್ಸಲರ್ ಎಂಜೆಲಾ ಮರ್ಕೆಲ್ ಸೋಂಕಿನ ವಿಚಾರವಾಗಿ ಸೂಕ್ತ ಕ್ರಮಗಳನ್ನು ಘೋಷಣೆ ಮಾಡದ ಹೊರತಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದಾರೆ.