ವಾಷಿಂಗ್ಟನ್, ಜೂ 02 (Daijiworld News/MSP): ಅಮೆರಿಕಾದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ ಶಾಂತಿ ಕದಡುವಂತೆ ಮಾಡಿದೆ. ಸಾವಿಗೆ ಕಾರಣವಾದ ಪೊಲೀಸರ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಹಿಂಸಾಚಾರಕ್ಕೆ ತಿರುಗಿದೆ. ವೈಟ್ಹೌಸ್ ಮುಂದೆ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರನ್ನು ಭದ್ರತಾ ಪಡೆಗಳು ಶ್ವೇತಭವನದಲ್ಲಿರುವ ರಹಸ್ಯ ಬಂಕರ್ ನಲ್ಲಿ ಇರಿಸಿದ್ದರು. ಈಗಾಗಲೇ ಹಿಂಸಾಚಾರದ ಪ್ರತಿಭಟನೆ ಹಿನ್ನಲೆಯಲ್ಲಿ ಅಮೆರಿಕದ ಹಲವು ರಾಜ್ಯಗಳ 140ಕ್ಕೂ ಅಧಿಕ ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಇನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂಕರ್ ಸೇರಿದ್ದರೂ, ಟ್ವಿಟರ್ ಮೂಲಕ ಪ್ರತಿಭಟನಾಕಾರರ ನಿಂದನೆಯಲ್ಲಿ ತೊಡಗಿದ್ದಾರೆ. ಇದಲ್ಲದೆ ಪ್ರತಿಭಟನಕಾರರಿಗೆ ನಿಮ್ಮನ್ನೆಲ್ಲಾ ಹತ್ತಿಕ್ಕಲು ಸೇನೆಗಳನ್ನು ಬಳಸಿಕೊಳ್ಳಬೇಕಾಗುತ್ತದೆ ಎಚ್ಚರ ಎಂದು ಟ್ರಂಪ್ ವಾರ್ನ್ ಮಾಡಿದ್ದರು, ಇದು ಸಾಲದು ಎಂಬಂತೆ ರಾಜ್ಯಗಳ ರಾಜ್ಯಪಾಲರಿಗೆ ವಿಡಿಯೋ ಕಾಲ್ ಮಾಡಿ ನಿಮ್ಮ ಅಧಿಕಾರ ಬಳಸಿ ನಿಯಂತ್ರಿಸಿ ಸಮಯ ಹಾಳು ಮಾಡಬೇಡಿ ಎಂದು ಸಿಡಿಮಿಡಿಗೊಂಡಿದ್ದರು.
ಈಗಾಗಲೇ ಪ್ರತಿಭಟನಕಾರರನ್ನು ನಿಂದಿಸಿ, ವಾರ್ನಿಂಗ್ ಮಾಡಿ ಮತ್ತಷ್ಟು ಪ್ರಚೋದನೆ ಮಾಡಿರುವ ಟ್ರಂಪ್ ಅವರಿಗೆ ಹ್ಯೂಸ್ಟನ್ ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೆಡೊ " ಟ್ರಂಪ್ ಅವರೇ, ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡು ಕುಳಿತಿರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಚೀಫ್ ಆರ್ಟ್ ಅಸೆವೆಡೊ, ದೇಶದ ಪೊಲೀಸರ ಪರವಾಗಿ ನಾನು ಟ್ರಂಪ್ ಬಳಿ ಕೇಳಿಕೊಳ್ಳುತ್ತಿದ್ದೇನೆ. ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಿ. ಪರಿಸ್ಥಿತಿ ಸರಿಯಾಗುವವರೆಗೂ ಮಾತನಾಡಬೇಡಿ. ಇಲ್ಲಿಲ್ಲಿ ಅನೇಕರು ಯುವಕರು ಇದ್ದಾರೆ. ಅವರ ಜೀವವನ್ನೆಲ್ಲ ಅಪಾಯಕ್ಕೆ ದೂಡಬೇಡಿ. ಇದೊಂದು ಸೂಕ್ಷ್ಮ ವಿಚಾರ. ಇಲ್ಲಿ ಪ್ರತಿಭಟನಾಕಾರರನ್ನು ದ್ವೇಷದಿಂದ, ಕೋಪದಿಂದ ಬಲದಿಂದ ಗೆಲ್ಲಲು ಸಾಧ್ಯವಿಲ್ಲ. ಪ್ರತಿಭಟನಕಾರರ ಮನವೊಲಿಸಿ ಹೃದಯವನ್ನು ಗೆಲ್ಲಬೇಕು ಎಂದು ಟ್ರಂಪ್ ಅವರ ಬಳಿ ಮನವಿ ಮಾಡಿದ್ದಾರೆ.