ವಾಷಿಂಗ್ಟನ್, ಜೂ 04 (DaijiworldNews/PY) : ಜನಾಂಗೀಯ ದ್ವೇಷದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ನಿರತರಾಗಿರುವ ಕೆಲವರು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊರಗಿನ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸರ ವಶದಲ್ಲಿದ್ದ ಸಂದರ್ಭ ಸಾವನ್ನಪ್ಪಿರುವುದನ್ನು ಖಂಡಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಹಾತ್ಮ ಗಾಂಧಿ ಪ್ರತಿಮೆಗೆ ಇದೇ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವವರಿಂದ ಹಾನಿಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಪಾರ್ಕ್ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಕರಣದ ಬಗ್ಗೆ ವಿವರ ನಿರೀಕ್ಷೆ ಮಾಡಲಾಗಿದೆ ಎಂದು ಗುರುವಾರ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಕೆನ್ ಜಸ್ಟರ್ ಅವರು ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದು, ವಾಷಿಂಗ್ಟನ್ ಡಿಸಿಯಲ್ಲು ಗಾಂಧಿ ಪ್ರತಿಮೆ ವಿರೂಪಗೊಂಡಿರುವುದನ್ನು ಕಾಣಲು ಕಷ್ಟವಾಗುತ್ತಿದೆ. ನಮ್ಮ ಪ್ರಾಮಾಣಿಕವಾದ ಕ್ಷಮಾಪಣೆಯನ್ನು ದಯವಿಟ್ಟು ಸ್ವೀಕರಿಸಿ ಎಂದು ಹೇಳಿದ್ದಾರೆ.
ಫ್ಲಾಯ್ಡ್ ಮೇ 25ರಂದು ಹತ್ಯೆಯಾದ ಬಳಿಕ ಅಮೆರಿಕದ ಹಲವು ಭಾಗಗಳಲ್ಲಿ ಸಾರ್ವಜನಿಕರು ತೀವ್ರವಾದ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಹಾಸ್ಟನ್ನಲ್ಲಿ ವಾಸಿಸುತ್ತಿದ್ದ 46 ವರ್ಷ ವಯಸ್ಸಿನ ಜಾರ್ಜ್ ಫ್ಲಾಯ್ಡ್ ಅವರನ್ನ ಕೈಕೋಳ ಹಾಕಿ, ಮುಖ ನೆಲಕ್ಕೆ ಮಾಡಿ ಉರುಳಿಸಿ ಕುತ್ತಿಗೆಯ ಮೇಲೆ ಮಂಡಿಯೂರಿದ್ದರು. ಈ ಸಂದರ್ಭ ಫ್ಲಾಯ್ಡ್ಗೆ ಉಸಿರು ಹಿಡಿದಂತಾಗಿ ಸಾವನ್ನಪ್ಪಿದ್ದರು. ಬಿಳಿ ಚರ್ಮದ ಪೊಲೀಸ್ ಅಧಿಕಾರಿಯು ಕಪ್ಪು ವರ್ಣಿಯನಾದ ಫ್ಲಾಯ್ಡ್ರನ್ನ ಹಿಂಸೆ ಮಾಡಿರುವುದು ಜನಾಂಗೀಯ ದ್ವೇಷದ ವಿರುದ್ಧದ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.