ಲಂಡನ್, ಜೂ. 04 (Daijiworld News/MB) : ಸಾಲ ಪಡೆದು ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯರನ್ನು ಇಂಗ್ಲೆಂಡ್ನಿಂದ ಭಾರತಕ್ಕೆ ಹಸ್ತಾಂತರಿಸುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಕಾರಣವನ್ನು ಬ್ರಿಟೀಷ್ ಹೈಕಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಸ್ಪಷ್ಟನೆ ನೀಡಿರುವ ಬ್ರಿಟಿಷ್ ಹೈಕಮಿಷನ್, ಕಾನೂನು ತೊಡಕು ಉಂಟಾಗಿದ್ದು, ಕಾನೂನು ಸಮಸ್ಯೆ ಬಗೆಹರಿಯದೆ ಭಾರತಕ್ಕೆ ಹಸ್ತಾಂತರ ಮಾಡಲಾಗದು ಎಂದು ತಿಳಿಸಿದೆ.
ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಯುನೈಟೆಡ್ ಕಿಂಗ್ಡಂ ಸುಪ್ರೀಂ ಕೋರ್ಟ್ ಈಗಾಗಲೇ ವಜಾ ಮಾಡಿದೆ. ಆದರೆ ಇನ್ನೂ ಹಲವು ಕಾನೂನು ಸಮಸ್ಯೆಗಳು ಇವೆ. ಈ ಸಮಸ್ಯೆ ಗೌಪ್ಯವಾದುದ್ದು ಅದರ ಬಗ್ಗೆ ಈಗಲೇ ತಿಳಿಸಲು ಸಾಧ್ಯವಿಲ್ಲ. ಹಾಗೆಯೇ ಈ ಸಮಸ್ಯೆ ಪರಿಹಾರಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂದು ಅಂದಾಜಿಸಲಾಗದು. ಸಾಧ್ಯವಾದಷ್ಟು ಬೇಗ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಳೆದ ಮೇ 14ರಂದು ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಉದ್ಯಮಿ ವಿಜಯ ಮಲ್ಯ ಯುಕೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಹಿನ್ನಲೆ ಭಾರತಕ್ಕೆ ಮಲ್ಯ ಅವರನ್ನು ಶೀಘ್ರವೇ ಕರೆತರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಈ ಕುರಿತು ಬ್ರಿಟೀಷ್ ಹೈಕಮಿಷನ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ.