ವಾಷಿಂಗ್ಟನ್, ಜೂ 05 (DaijiworldNews/PY) : ಚೀನಾ ಹಾಂಕ್ಕಾಂಗ್ ವಿಚಾರದಲ್ಲಿ ನೀಡಿರುವ ಭರವಸೆಗಳಿಗೆ ಬದ್ದವಾಗಿರಬೇಕು ಹಾಗೂ ಅಲ್ಪಸಂಖ್ಯಾತರ ವಿರುದ್ದದ ಕಿರುಕುಳವನ್ನು ಕೊನೆಗೊಳಿಸಬೇಕು. ಮಾನವ ಹಕ್ಕುಗಳನ್ನು ಚೀನಾ ಗೌರವಿಸಬೇಕು ಎಂದು ಚೀನಾದ ಬೀಜಿಂಗ್ನಲ್ಲಿರುವ ಟಿಯಾನನ್ಮೆನ್ ಸ್ಕ್ವೇರ್ನ 31ನೇ ವರ್ಷಾಚರಣೆಯನ್ನುದ್ದೇಶಿಸಿ ಅಮೆರಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಬಗ್ಗೆ ಶ್ವೇತ ಭವನ ಹೇಳಿಕೆ ಬಿಡುಗಡೆ ಮಾಡಿದ್ದು, ನಿರಾಯುಧರಾದ ಚೀನಾ ನಾಗರಿಕರ ಹತ್ಯೆ ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಅಡಿಯಲ್ಲಿ ಹಾಂಕ್ಕಾಂಗ್ನ ಸ್ಥಾನಮಾನ ರಕ್ಷಣೆಗೆ ಸಂಬಂಧಪಟ್ಟಂತೆ ಚೀನಾ ಬದ್ದವಾಗಿರಬೇಕು ಎಂದು ತಿಳಿಸಿದೆ.
ಚೀನಾದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವಂತೆ ಆಗ್ರಹಿಸಿ 1989ರಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಟಿಯಾನನ್ಮೆನ್ ಸ್ಕ್ವೇರ್ನಲ್ಲಿ ಹತ್ತಿಕ್ಕಲಾಗಿತ್ತು. ಆದರೆ, ಇದರ ವರ್ಷಾಚರಣೆಯ ಸಂದರ್ಭ ಅಮೆರಿಕದಲ್ಲಿ ಜನಾಂಗೀಯ ದ್ವೇಷದ ವಿರುದ್ದ ಪ್ರತಿಭಟನೆಗಳು ನಡೆಯುತ್ತಿವೆ.
ದೇಶದ ಎಲ್ಲ ನಾಗರಿಕರಿಗೆ ಚೀನಾದ ಸಂವಿಧಾನದಡಿಯಲ್ಲಿ ಖಚಿತಪಡಿಸಲಾಗಿರುವ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕು. ಅಲ್ಲದೇ, ಲಕ್ಷಾಂತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ದದ ಜನಾಂಗೀಯ ಕಿರುಕುಳವನ್ನು ವ್ಯವಸ್ಥಿತವಾಗಿ ಕೊನೆಗೊಳಿಸಬೇಕು ಎಂದು ಒತ್ತಾಯ ಮಾಡಿದೆ.
ಪ್ರತಿಭಟನೆಯನ್ನು ನಿಯಂತ್ರಣ ಮಾಡಲು ಮಿಲಿಟರಿಯನ್ನು ನಿಯೋಜನೆ ಮಾಡಲಾಗುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.