ವಾಷಿಂಗ್ಟನ್, ಜೂ 05 (DaijiworldNews/PY) : ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ ಆಫ್ರಿಕಾ ಮೂಲಕ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಎಂಬುವವರ ಗೌರವಾರ್ಥವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದ ವಿಡಿಯೋವನ್ನು ಟ್ವಿಟ್ಟರ್ ತೆಗೆದುಹಾಕಿದೆ.
ಜೂನ್ 3ರಂದು ಟ್ರಂಪ್ 3 ನಿಮಿಷ 45 ಸೆಕೆಂಡ್ ಅವಧಿಯ ವಿಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ವಿಡಿಯೋವನ್ನು ಕಾಪಿರೈಟ್ ಸಮಸ್ಯೆಯ ಕಾರಣದಿಂದ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.
ಮಿನಿಯಾಪೊಲೀಸ್ ನಗರದ ಶ್ವೇತವರ್ಣೀಯ ಪೊಲೀಸ್ ಅಧಿಕಾರಿಯೊಬ್ಬರು ಫ್ಲಾಯ್ಡ್ ಅವರನ್ನು ನೆಲಕ್ಕೆ ಉರುಳಿಸಿ, ಅವರ ಕತ್ತಿನ ಮೇಲೆ ತನ್ನ ಮಂಡಿಯನ್ನಿಟ್ಟಿದ್ದರು. ಇದರಿಂದ ಫ್ಲಾಯ್ಡ್ ಉಸಿರುಗಟ್ಟಿ ಪ್ರಾಣಬಿಟ್ಟಿದ್ದರು. ಈ ಘಟನೆಯನ್ನು ಜನಾಂಗೀಯ ದೌರ್ಜನ್ಯ ಎಂದು ಬಣ್ಣಿಸಲಾಗುತ್ತಿದೆ.
ಈ ಘಟನೆಯಾದ ನಂತರ ಮಿನಿಯಾ ಪೊಲೀಸ್ ನಗರದಲ್ಲಿ ಪ್ರತಿಭಟನೆ ಪ್ರಾರಂಭವಾಗಿತ್ತು. ಈ ಪ್ರತಿಭಟನೆ ಈಗ ಅಮೆರಿಕದಾದ್ಯಂತ ಹಬ್ಬಿದ್ದು, ಹ್ಯೂಸ್ಟನ್, ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಫಿಲಡೆಲ್ಫಿಯಾ, ಲಾಸ್ಏಂಜಲೀಸ್ ಹಾಗೂ ಷಿಕಾಗೊ ನಗರಗಳಲ್ಲಿ ತೀವ್ರವಾಗಿ ನಡೆಯುತ್ತಿದೆ.
ಇದೀಗ, ಒಬ್ಬ ಪೊಲೀಸ್ ಅಧಿಕಾರಿಯನ್ನು ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಪ್ರತಿಯಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಪ್ರತಿಭಟನಾಕರರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮಿಲಿಟರಿ ನಿಯೋಜನೆ ಮಾಡಲಾಗುವುದು ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.