ಬೀಜಿಂಗ್, ಜೂ. 06 (Daijiworld News/MB) : 'ಗಡಿ ವಿವಾದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ಸಮಸ್ಯೆ ಬಗೆಹರಿಸಲು ನಾವು ಬದ್ಧವಾಗಿದ್ದೇವೆ' ಎಂದು ಚೀನಾ ಶುಕ್ರವಾರ ತಿಳಿಸಿದೆ.
ಭಾರತ ಹಾಗೂ ಚೀನಾ ಯೋಧರ ನಡುವೆ ಲಡಾಖ್ನ ಪೂರ್ವ ಗಡಿಯಲ್ಲಿ ಘರ್ಷನೆ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣದಿಂದಾಗಿ ಈ ಎರಡು ದೇಶಗಳ ಹಿರಿಯ ಅಧಿಕಾರಿಗಳು ಶನಿವಾರ (ಜೂನ್ 6) ಮಾತುಕತೆ ನಡೆಸಲಿದ್ದು ಏತನ್ಮಧ್ಯೆ ಶುಕ್ರವಾರ ಚೀನಾ ಸಮಸ್ಯೆ ಪರಿಹಾರಕ್ಕೆ ಸಿದ್ಧವಾಗುರುವುದಾಗಿ ಹೇಳಿದೆ.
ಈ ಕುರಿತಾಗಿ ಮಾಧ್ಯಮಗಳಿಗೆ ತಿಳಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, 'ಪ್ರಸ್ತುತ ಉಭಯ ದೇಶಗಳ ಗಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದು ನಾವು ಗಡಿ ವಿಷಯಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತವಾದ ಕಾರ್ಯವಿಧಾನ ಹೊಂದಿದ್ದೇವೆ. ಈ ಬಗ್ಗೆ ನಾವು ನಿಗಾ ವಹಿಸುತ್ತೇವೆ' ಎಂದು ತಿಳಿಸಿದ್ದಾರೆ.
ಇನ್ನು ಭಾರತ ಚೀನಾದೊಂದಿಗಿನ ಮಾತುಕತೆ ಸಂದರ್ಭದಲ್ಲಿ ಪಾಂಗ್ಯಾಂಗ್ ಸರೋವರ, ಗಾಲ್ವನ್ ಕಣಿವೆ ಹಾಗೂ ಡೆಮ್ಚೋಕ್ ಪ್ರದೇಶದಲ್ಲಿನ ಸಮಸ್ಯೆಗಳ ಕುರಿತಾಗಿಯೂ ಮಾತುಕತೆ ನಡೆಸಲಿದೆ ಎಂಬ ನಿರೀಕ್ಷೆಯಿದ್ದು ಭಾರತವನ್ನು ಪ್ರತಿನಿಧಿಸಿ ಲೆ.ಜ.ಹರಿಂದರ್ ಸಿಂಗ್ ಅವರು ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.