ಜಿನಿವಾ, ಜೂ.09 (DaijiworldNews/MB) : ವಿವಿಧ ದೇಶಗಳು ರೋಗ ಲಕ್ಷಣಗಳು ಇಲ್ಲದವರಿಂದ ಸೋಂಕು ಹರಡುವ ಬಗ್ಗೆ ಎಚ್ಚರಿಕೆ ನೀಡುತ್ತಿರುವ ನಡುವೆಯೇ ರೋಗದ ಲಕ್ಷಣಗಳಿಲ್ಲದ ಜನರಿಂದ ಕೊರೊನಾ ಹರಡುವುದು ಅಪರೂಪ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಡಬ್ಲ್ಯೂಎಚ್ಒ ಮಹಾನಿರ್ದೇಶಕ ಟೆಡ್ರೂಸ್ ಅಧಾನೊಮ್ ಘೆಬ್ರೆಯೆಸಸ್, ಯೂರೋಪಿನಲ್ಲಿ ಪರಿಸ್ಥಿತಿ ಸುಧಾರಿಸಿದ್ದರೂ ಕೂಡಾ ಕೊರೊನಾ ಸೋಂಕಿನಿಂದಾಗಿ ವಿಶ್ವದಾದ್ಯಂತ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕಳೆದ 10 ದಿನಗಳಲ್ಲಿ 100,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಭಾನುವಾರ ಅತಿಹೆಚ್ಚು 136, 000 ಪ್ರಕರಣಗಳು ವರದಿಯಾಗಿದೆ. ಆದರೆ ಅನೇಕ ರಾಷ್ಟ್ರಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿದೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ವಿಭಾಗದ ಮಾರಿಯಾ ವ್ಯಾನ್ ಕೆರ್ಖೋವ್ ಮಾತನಾಡಿ, ಬ್ರಿಟನ್, ಅಮೆರಿಕಾ ಸೇರಿದಂತೆ ಹಲವು ದೇಶಗಳು ರೋಗಲಕ್ಷಣವಿಲ್ಲದ ಜನರಿಂದ ಸೋಂಕು ಹರಡುತ್ತದೆ ಎಂದು ವರದಿ ಮಾಡಿದ್ದು ಈ ಬಗ್ಗೆ ಎಚ್ಚರಿಕೆಯೂ ನೀಡಿದೆ. ಆದರೆ ಈ ಪ್ರಕರಣಗಳ ಕುರಿತಾಗಿ ವಿವರವಾಗಿ ಪ್ರಶ್ನೆ ಮಾಡಿದಾಗ ಹಲವರಿಗೆ ಸಣ್ಣ ಪ್ರಮಾಣದ ಕಾಯಿಲೆ ಇರುವುದು ಕಂಡು ಬಂದಿದೆ. ಇದು ಸೋಂಕು ಹರಡಲು ಚಾಲನೆಯಲ್ಲ. ಪ್ರಾಯಶಃ ಸುಮಾರು 6% ರಷ್ಟು ಹರಡುವಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.