ವಾಷಿಂಗ್ಟನ್, ಜೂ.09 (DaijiworldNews/MB) : ಆಫ್ರಿಕನ್-ಅಮೆರಿಕಾದ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದು ಇದೊಂದು ಅಪಮಾನವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಶ್ವೇತಭವನದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಘಟನೆಯು ಅಪಮಾನವಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಘಟನೆಯನ್ನು ಖಂಡಿಸಿರುವ ಉತ್ತರ ಕಾರೊಲಿನಾ ಸೆನೆಟರ್ ಟಾಮ್ ಟಿಲ್ಲಿಸ್, ಶಾಂತಿಯುತ ಪ್ರತಿಭಟನೆ ಮೂಲಕ ಗಾಂಧಿ ಅತ್ಯುನ್ನತ ಬದಲಾವಣೆ ಮಾಡಿದ್ದು ಅಂತವರ ಪ್ರತಿಮೆ ವಿರೂಪಗೊಳಿಸುವುದು ನಾಚಿಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಹಾಗೆಯೇ ಡೊನಾಲ್ಡ್ ಟ್ರಂಪ್ ಸಲಹೆಗಾರ ಕಿಂಬರ್ಲಿ ಗಿಲ್ಫಾಯ್ಲ್ ಟ್ವೀಟ್ ಮಾಡಿ, ಗಾಂಧಿ ಪ್ರತಿಮೆ ವಿರೂಪಗೊಳಿಸಿರುವುದನ್ನು ಅಮೆರಿಕಾದ ಉನ್ನತ ಜನಪ್ರತಿನಿಧಿಗಳು ಕೂಡಾ ಖಂಡಿಸಿದ್ದು ಈ ಘಟನೆಯಿಂದ ಬಹಳ ಬೇಸರ ಉಂಟಾಗಿದೆ ಎಂದು ಹೇಳಿದ್ದರು.
ಪೊಲೀಸ್ ಕಸ್ಟಡಿಯಲ್ಲಿದ್ದ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಭಾರತೀಯ ರಾಯಭಾರಿ ಕಚೇರಿ ಬಳಿಯ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕೆಲ ದಿನಗಳ ಹಿಂದೆ ವಿರೂಪಗೊಳಿಸಿದ್ದು ಈ ಬಗ್ಗೆ ಅಮೆರಿಕ ಭಾರತೀಯ ರಾಯಭಾರಿ ಕೆನ್ ಜಸ್ಟರ್ ಕ್ಷಮಾಪಣೆ ಕೋರಿದ್ದರು.