ನ್ಯೂಯಾರ್ಕ್, ಜೂ 12 (DaijiworldNews/PY) : ಈಗಾಗಲೇ ಅಮೆರಿಕಾ ಕೊರೊನಾದಿಂದಾಗಿ ತತ್ತರಿಸಿದ್ದು, ಸೆಪ್ಟೆಂಬರ್ ವೇಳೆಗೆ 2 ಲಕ್ಷ ಸಾವಿನ ಪ್ರಕರಣಗಳ ಗಡಿ ದಾಟಲಿದೆ ಎಂದು ಖ್ಯಾತ ಇಂಡೋ- ಅಮೆರಿಕನ್ ಪ್ರಾಧ್ಯಾಪಕ ಆಶಿಶ್ ಝಾ ಎಚ್ಚರಿಕೆ ನೀಡಿದ್ದಾರೆ.
ಹಾರ್ವರ್ಡ್ನ ಗ್ಲೋಬಲ್ ಹೆಲ್ತ್ ಇನ್ಸ್ಟಿಟ್ಯೂಟ್ ಮುಖ್ಯಸ್ಥರಾದ ಝಾ ಅವರು, ಎರಡು ಲಕ್ಷ ಸಾವು ಕೇವಲ ಕಲ್ಪನೆಯಲ್ಲ. ಪ್ರಸ್ತುತ ಅಮೆರಿಕದಲ್ಲಿ ನಿತ್ಯ 800- 1000 ಮಂದಿ ಸಾವನ್ನಪ್ಪುತ್ತಿದ್ದಾರೆ. ತಿಂಗಳಿಗೆ 25 ಸಾವಿರ ಸೋಂಕಿತರು ಪ್ರಾಣ ಬಿಡುತ್ತಿದ್ದಾರೆ. ಈ ಸಂಖ್ಯೆಯನ್ನು ಅಧರಿಸಿಯೇ ನಾವು ಹೇಳುವುದಾದರೆ, ಮುಂದಿನ ಮೂರು ತಿಂಗಳುಗಳಲ್ಲಿ ಅಮೆರಿಕದಲ್ಲಿ 85 ಸಾವಿರಕ್ಕೂ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗುತ್ತದೆ ಎಂದು ಹೇಳಿದ್ದಾರೆ.
ಅಮೆರಿಕವು ಬೇಸಿಗೆಯಲ್ಲಿ ಕಡಿಮೆ ಸಾವಿನ ಪ್ರಮಾಣವನ್ನು ಕಾಣುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ನಿರೀಕ್ಷೆಗಳೆಲ್ಲ ತಲೆಕೆಳಗಾಗಿವೆ. ನ್ಯೂಯಾರ್ಕ್, ನ್ಯೂಜೆರ್ಸಿ, ಕೆನಕ್ಟಿಕಟ್, ಮೆಸ್ಸಾಚುಸೆಟ್ಸ್ಗಳಲ್ಲೇನೋ ಸೋಂಕಿನ ಪ್ರಕರಣಗಳು ಕೊಂಚ ಕ್ಷೀಣಿಸುತ್ತಿದೆ. ಆದರೆ, ಅರಿಜೋನಾ, ಫ್ಲೋರಿಡಾ, ಟೆಕ್ಸಾಸ್, ಉತ್ತರ ಹಾಗೂ ದಕ್ಷಿಣ ಕೆರೊಲಿನಾಗಳಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಹೇಳಿದ್ದಾರೆ.
ಟೆಕ್ಸಾಸ್ನಲ್ಲಿ ಬುಧವಾರ 2,500ಕ್ಕಿಂತಲೂ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳಿಂದ ಲಾಕ್ ಡೌನ್ಮುಕ್ತವಾಗಿರುವ ಫ್ಲೋರಿಡಾದಲ್ಲಿ ಈ ವಾರ 8,553 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.