ಇಸ್ಲಾಮಾಬಾದ್, ಜೂ 12 (DaijiworldNews/PY) : ಕಾಶ್ಮೀರವು ಭಾರತದ ಭಾಗ ಎಂದು ಬಿಂಬಿಸುವ ನಕ್ಷೆಯನ್ನು ಪಾಕಿಸ್ತಾನದ ಅಧಿಕೃತ ಟಿ.ವಿ ವಾಹಿನಿಯೊಂದು ಪ್ರಸಾರ ಮಾಡಿದ್ದು, ಇದು, ಸೂಕ್ತವಾದ ನಕ್ಷೆಯಲ್ಲ. ಇದನ್ನು ಪ್ರಸಾರ ಮಾಡಿದ್ದು ಕರ್ತವ್ಯಲೋಪ ಎಂದು ಪ್ರತಿಪಾದನೆ ಮಾಡಿರುವ ಸುದ್ದಿವಾಹಿನಿಯ ಆಡಳಿತವು, ತನ್ನ ಇಬ್ಬರು ಸಿಬ್ಬಂದಿಯನ್ನು ವಜಾ ಮಾಡಿದೆ.
ಸಾಂದರ್ಭಿಕ ಚಿತ್ರ
ಜೂನ್ 6ರಂದು ನಕ್ಷೆಯನ್ನು ಪ್ರಸಾರ ಮಾಡಲಾಗಿತ್ತು. ಸಂಸತ್ತಿನಲ್ಲಿ ಜೂನ್ 8ರಂದು ಈ ವಿಷಯದ ಬಗ್ಗೆ ಚರ್ಚೆಯಾಗಿತ್ತು. ವಿಷಯವನ್ನು ಸ್ಥಾಯಿ ಸಮಿತಿ ವಿವೇಚನೆಗೆ ಒಪ್ಪಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಸತ್ತಿನ ಅಧ್ಯಕ್ಷ ಸಾದಿಕ್ ಸಂಜ್ರಾಣಿ ಅವರು ಸೂಚನೆ ನೀಡಿದ್ದರು.
ಸುದ್ದಿವಾಹಿನಿಯ ಆಡಳಿತವು ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಹಾಗಾಗಿ, ಇಬ್ಬರನ್ನು ಜೂನ್ 10ರಂದು ಸೇವೆಯಿಂದ ವಜಾಮಾಡಿ ಆದೇಶಿಸಿತು.