ವಾಷಿಂಗ್ಟನ್, ಜೂ 12 (DaijiworldNews/PY) : ಪೊಲೀಸರ ಬಲಪ್ರಯೋಗ ವೃತ್ತಿಪರ ಮಟ್ಟದಲ್ಲಿರುವ ರೀತಿ ಕಾನೂನು ರೂಪಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎರಡು ವಾರಗಳ ಹಿಂದೆ ನಡೆದಿದ್ದ ಆ ಘಟನೆಯು ತಲೆತಗ್ಗಿಸುವಂತೆ ಇತ್ತು. ನಂತರದ ದಿನಗಳಲ್ಲಿ ಹಲವರು ಮೃತಪಟ್ಟಿದ್ದಾರೆ. ಅಂತಹ ಘಟನೆಯನ್ನು ಪುನಃ ನೋಡಲು ಬಯಸುವುದಿಲ್ಲ ಎಂದು ಟ್ರಂಪ್ ಗುರುವಾರ ನಡೆದ ದುಂಡುಮೇಜಿನ ಸಭೆಯಲ್ಲಿ ತಿಳಿಸಿದ್ದಾರೆ.
ಈ ಕಾನೂನು ದೇಶದಾದ್ಯಂತ ಪೊಲೀಸ್ ಇಲಾಖೆ ಅತ್ಯಂತ ವೃತ್ತಿಪರವಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜನ ನೀಡುವ ರೀತಿಯಲ್ಲಿ ಇರಲಿದೆ. ಅಲ್ಲದೇ, ಈ ಕಾನೂನು ಪ್ರತಿಭಟನೆಯ ಸಂದರ್ಭದಲ್ಲಿಯೂ ಸಂಯಮ ವಹಿಸುವ ಮಾರ್ಗೋಪಾಯಗಳನ್ನು ಒಳಗೊಂಡಿದೆ ಎಂದಿದ್ದಾರೆ.
ಇದರ ಬಗ್ಗೆ ಕೆಲವು ವಿವರಗಳನ್ನು ನೀಡಿದ ಟ್ರಂಪ್, ಪ್ರತಿಯೊಂದು ಸಮುದಾಯದ ಮಕ್ಕಳು ಹಿಂಸೆ, ಭಯದಿಂದ ಮುಕ್ತವಾದಂತಹ ವಾತಾವರಣದಲ್ಲಿ ಬೆಳೆಯಬೇಕು ಎಂದು ಹೇಳಿದ್ದಾರೆ.
ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಆದೇಶದೊಂದಿಗೆ, ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಅಭಿವೃದ್ದಿ ಕಡೆ ಯೋಜನೆ ಹಮ್ಮಿಕೊಳ್ಳಲಾಗುವುದು. ಆರೋಗ್ಯ ಕಾಳಜಿ ವಿಷಯದಲ್ಲಿಯೂ ತಾರತಮ್ಯ ನಿವಾರಣೆ, ಶಾಲೆಗಳ ಆಯ್ಕೆಗೆ ಅವಕಾಶ ಕಲ್ಪಿಸುವ ವಿಷಯದಲ್ಲಿಯೂ ಗಮನವಹಿಸಲಾಗಿವುದು ಎಂದು ಹೇಳಿದ್ದಾರೆ.
ಜನರು ಎಲ್ಲಿಯೇ ಹೋದರೂ ಅಂದಾಭಿಮಾನ ಹಾಗೂ ಪೂರ್ವಗ್ರಹಗಳನ್ನು ತೊಡೆದುಹಾಕಲು ಒಗ್ಗಟ್ಟಾಗಬೇಕು. ರಾಜಕಾರಣಿಗಳು ಪೊಳ್ಳು ಆರೋಪಗಳನ್ನು ಮಾಡುತ್ತಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ ಎಂದರು.