ವಾಷಿಂಗ್ಟನ್, ಜೂ.13 (DaijiworldNews/MB) : ಅಮೆರಿಕಾದಲ್ಲಿ ಚುನಾವಣಾ ಪ್ರಚಾರಕ್ಕೆ ಟ್ರಂಪ್ ಮುಂದಾಗಿದ್ದು, "ರ್ಯಾಲಿಗೆ ಬನ್ನಿ, ಕೊರೊನಾ ಸೋಂಕು ತಗುಲಿದರೆ ನಮ್ಮನ್ನು ದೂಷಿಸಬೇಡಿ" ಎಂದು ಟ್ರಂಪ್ ಅವರ ವೆಬ್ಸೈಟ್ನಲ್ಲಿ ಸೂಚಿಸಲಾಗಿದೆ.
ವಿಶ್ವದಲ್ಲೇ ಅಧಿಕ ಕೊರೊನಾ ಸೋಂಕಿತರ ಸಂಖ್ಯೆ ದಾಖಲಾಗಿರುವ ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಚುನಾವಣಾ ಪ್ರಚಾರ ನಡೆಯಲಿದೆ. ಕೊರೊನಾ ವೈರಸ್ ಸೋಂಕು ಅಧಿಕವಾಗಿರುವ ಈ ಸಂದರ್ಭದಲ್ಲಿ ಜನರು ಗುಂಪುಗೂಡುವುದು ಸರಿಯಲ್ಲ ಎಂದು ವೈದ್ಯರ ಸಲಹೆಗಳನ್ನು ನೀಡಿದ್ದು ಏತನ್ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ್ಯಾಲಿಗಳು ನಿಗದಿಯಾಗುತ್ತಿದ್ದು ಜನರಿಗೆ ಮಾತ್ರ "ರ್ಯಾಲಿಗೆ ಬನ್ನಿ, ಕೊರೊನಾ ಸೋಂಕು ತಗುಲಿದರೆ ನಮ್ಮನ್ನು ದೂಷಿಸಬೇಡಿ" ಎಂದು ಹೇಳಲಾಗಿದೆ.
ವೆಬ್ಸೈಟ್ನಲ್ಲಿ ರ್ಯಾಲಿಗೆ ಬರುವವರು "ನಾವು ರ್ಯಾಲಿಯಲ್ಲಿ ಭಾಗವಹಿಸಲು ಇಚ್ಚಿಸುತ್ತಿರುವ ಪ್ರದೇಶದಲ್ಲಿ ಕೊರೊನಾದ ಅಪಾಯವಿದೆ ಎಂದು ತಿಳಿದಿದೆ ಎಂದು ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿದ ಬಳಿಕ ರ್ಯಾಲಿಯಲ್ಲಿ ಭಾಗಿಯಾಗಬಹುದು. ಆ ಬಳಿಕ ಕೊರೊನಾ ಬಂದಲ್ಲಿ ಟ್ರಂಪ್ ಅಥವಾ ಅವರಿಗೆ ಸಂಬಂಧಿಸಿದ ಯಾರನ್ನೂ ಕೂಡಾ ದೂಷಿಸಬಾರದು ಎಂದು ತಿಳಸಲಾಗಿದೆ.
ಡೊನಾಲ್ಡ್ ಟ್ರಂಪ್ ಅವರ ರ್ಯಾಲಿಯು 19 ಸಾವಿರ ಮಂದಿ ಕೂರಲು ಅವಕಾಶವಿರುವ ಟೆಲ್ಸಾದ ಬಿಒಕೆ ಕೇಂದ್ರದಲ್ಲಿ ಜೂನ್ 19ರಂದು ನಡೆಯಲಿದೆ.