ಬೀಜಿಂಗ್, ಜೂ.14 (DaijiworldNews/MB) : ವಿಶ್ವದಲ್ಲೇ ಮೊದಲ ಭಾರೀ ಕೊರೊನಾ ಸೋಂಕು ಪತ್ತೆಯಾದ ಚೀನಾದಲ್ಲಿ ಏಪ್ರಿಲ್ ಬಳಿಕ ಕೊರೊನಾ ಸೋಂಕುಗಳ ಸಂಖ್ಯೆ ಇಳಿಮುಖವಾದ ಕಾರಣ ಹಲವು ಕಾರ್ಯ ಚಟುವಟಿಕೆಗಳನ್ನು ಆರಂಭಿಸಲಾಗಿತ್ತು. ಆದರೆ ಈಗ ಒಂದೇ ದಿನದಲ್ಲಿ 57 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಚೀನಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚುವ ಆತಂಕ ಸರ್ಕಾರಕ್ಕೆ ಉಂಟಾಗಿದೆ.
ಈ 57 ಹೊಸ ಪ್ರಕರಣಗಳ ಪೈಕಿ 37 ಪ್ರಕರಣಗಳು ಚೀನಾದಲ್ಲೇ ವರದಿಯಾಗಿದ್ದು, ಇನ್ನು 20 ಪ್ರಕರಣಗಳು ವಿದೇಶಗಳಿಂದ ಆಗಮಿಸಿದ್ದ ಚೀನೀಯರದ್ದು ಎಂದು ವರದಿಯಾಗಿದೆ.
ಇನ್ನು ಬೀಜಿಂಗ್ನ ಮೀನು ಮಾರುಕಟ್ಟೆಯಲ್ಲಿ ಅಧಿಕ ಪ್ರಕರಣಗಳು ಕಂಡು ಬಂದ ಕಾರಣದಿಂದಾಗಿ ಬೀಜಿಂಗ್ನ ಜಿನ್ ಫಾದಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು ತರಕಾರಿ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆಯ ಸುತ್ತಮುತ್ತಲಿನಲ್ಲಿರುವ ಶಾಲಾ-ಕಾಲೇಜು, ಸೂಪರ್ ಮಾರ್ಕೆಟ್ ಗಳನ್ನು ಮುಚ್ಚಲಾಗಿದೆ.
ಚೀನಾದಲ್ಲಿ ಇದೀಗ ಸೋಂಕಿತರ ಸಂಖ್ಯೆ 83,132ಕ್ಕೆ ಏರಿಕೆಯಾಗಿದ್ದು ಈವರೆಗೆ 4,634 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.