ಜಿನೀವಾ, ಜೂ.15 (DaijiworldNews/MB) : ಮಹಿಳೆಯರು, ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಕೊರೊನಾ ಸೋಂಕಿನ ಪ್ರಭಾವದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಸೋಂಕಿನಿಂದ ಸಾವನ್ನಪ್ಪುವವರಿಗಿಂತ ಈ ವರ್ಗದವರ ಮೇಲೆ ಕೊರೊನಾ ಪರೋಕ್ಷ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಕೊರೊನಾ ವೈರಸ್ ಜಾಗತಿಕವಾಗಿ ಆರೋಗ್ಯ ವ್ಯವಸ್ಥೆಗೆ ಹಾನಿ ಉಂಟು ಮಾಡಿದ್ದು ಈ ಸೋಂಕಿನಿಂದ ಮಹಿಳೆಯರು ಗರ್ಭಿಣಿಯಾಗಿದ್ದಾಗ ಹಾಗೂ ಹೆರಿಗೆಯಾಗುವ ಸಂದರ್ಭದಲ್ಲಿ ಸಾಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ಶಾಲಾ - ಕಾಲೇಜು ಮುಚ್ಚಲಾಗಿದ್ದು ಶಿಕ್ಷಣ ಉದ್ಯೋಗಕ್ಕೆ ತೊಂದರೆ ಉಂಟಾಗಲಿದೆ. ಇದರಿಂದಾಗಿ ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಪರಿಣಾಮವಾಗುತ್ತದೆ. ಆದ್ದರಿಂದ ಅವರ ಮೇಲೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.
ಇನ್ನು ಶಂಕಿತ ಹಾಗೂ ಸೋಂಕಿತ ತಾಯಂದಿರು ಮಗುವಿಗೆ ಹಾಲುಣಿಸಲು ಯಾವುದೇ ಭಯಪಡಬೇಕಾಗಿಲ್ಲ. ಅದರಿಂದಾಗಿ ಮಗುವಿಗೆ ಯಾವುದೇ ಅಪಾಯವಿಲ್ಲ. ಅನಾರೋಗ್ಯ ಕಾರಣದಿಂದ ತಾಯಿ ಮಗುವನ್ನು ದೂರ ಮಾಡದೇ ಹಾಲುಣಿಸಬೇಕು ಎಂದು ಹೇಳಿದರು.