ಬೀಜಿಂಗ್, ಜೂ.16 (DaijiworldNews/MB) : ಕೊರೊನಾ ಗೆದ್ದ ಚೀನಾ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಂತೆ ಮತ್ತೆ ಹೊಸ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು ಚೀನಾದಲ್ಲಿ ಆತಂಕ ಉಂಟಾಗಿದೆ. ಹೊಸ ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ರಾಜಧಾನಿ ಬೀಜಿಂಗ್ನ ಹಲವು ಭಾಗಗಳಲ್ಲಿ ಸೋಮವಾರ ಲಾಕ್ಡೌನ್ ಜಾರಿಗೊಳಿಸಲಾಗಿದ್ದು ಚೀನಾ ಸರ್ಕಾರ ಇಲ್ಲಿ ಸಾಮೂಹಿಕ ಪರೀಕ್ಷೆ ಪ್ರಕ್ರಿಯೆ ಆರಂಭ ಮಾಡಿದೆ.
ಕೆಲ ದಿನಗಳ ಹಿಂದೆ ನಗರದ ಕ್ಸಿನ್ಫಾಡಿ ಮಾರುಕಟ್ಟೆಯಲ್ಲಿ ಸೋಂಕು ಮತ್ತೆ ಪತ್ತೆಯಾಗಿದ್ದು ಈ ಕಾರಣ ಮಾರುಕಟ್ಟೆ ಸೀಲ್ಡೌನ್ ಮಾಡಲಾಗಿದೆ. ಚೀನಾದ ರಾಜಧಾನಿ ಬೀಜಿಂಗ್ನಲ್ಲಿ 79 ಹೊಸ ಪ್ರಕರಣಗಳು ಪತ್ತೆಯಾಗಿದ್ದು ನಗರದ ಒಳಾಂಗಣ ಕ್ರೀಡೆಗಳು ಹಾಗೂ ಎಲ್ಲಾ ರೀತಿಯ ಮನೋರಂಜನಾ ಕೇಂದ್ರಗಳನ್ನು ಬಂದ್ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೀಜಿಂಗ್ನ ಆರೋಗ್ಯ ಆಯೋಗದ ವಕ್ತಾರ ಗಾವೋ ಕ್ಸಿಯಾಜುನ್, ಕ್ಸಿನ್ಫಾಡಿ ಮಾರುಕಟ್ಟೆಯಲ್ಲಿ ಸೋಂಕು ಮತ್ತೆ ಪತ್ತೆಯಾದ ಬಳಿಕ ಮಾರುಕಟ್ಟೆಯ ಬಳಿ ಇರುವ 21 ಬಡಾವಣೆಗಳು ಹಾಗೂ ಅಲ್ಲಿಗೆ ಭೇಟಿ ನೀಡಿದ್ದ ಜನರು ವಾಸವಿರುವ ಹತ್ತು ಪ್ರದೇಶವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದ್ದು ಇಲ್ಲಿ ಸುಮಾರು 90,000 ಜನರಿದ್ದಾರೆ. ಮಾರುಕಟ್ಟೆಗೆ ಭೇಟಿ ನೀಡಿದ್ದ 29,386 ಜನರನ್ನು ನ್ಯೂಕ್ಲಿಕ್ ಆಮ್ಲ ಪರೀಕ್ಷೆಗೆ ಒಳಪಡಿಸಲಾಗಿದೆ. ಮೇ 30ರಿಂದ ಮಾರುಕಟ್ಟೆಗೆ 2 ಲಕ್ಷಕ್ಕೂ ಅಧಿಕ ಗ್ರಾಹಕರು ಭೇಟಿ ನೀಡಿದ್ದು, ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.