ವಾಷಿಂಗ್ಟನ್, ಜೂ.16 (DaijiworldNews/MB) : ಕೊರೊನಾ ಸೋಂಕಿಗೆ ಲಸಿಕೆಯ ಸಂಶೋಧನೆಯಲ್ಲಿ ಅಮೆರಿಕವು ಭಾರೀ ಪ್ರಗತಿ ಸಾಧಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಅವರು ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿ ಈ ಬಗ್ಗೆ ಮಾತನಾಡಿದ್ದು, ಕೊರೊನಾ ಸೋಂಕಿನ ಲಸಿಕೆಗೆ ಸಂಬಂಧಿಸಿ ಶೀಘ್ರವೇ ಒಂದು ಒಳ್ಳೆಯ ಸುದ್ದಿಯನ್ನು ನೀಡಲಿದ್ದೇವೆ ಎಂದು ಹೇಳಿದರು.
ಅಮೆರಿಕದಲ್ಲಿ ಈಗ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಅತೀ ಶೀಘ್ರದಲ್ಲಿ ಅಮೆರಿಕ ಕೊರೊನಾ ಮುಕ್ತವಾಗಲಿದೆ ಎಂದರು.
ಹಾಗೆಯೇ ಸೋಂಕಿನಿಂದ ಗುಣಮುಖರಾದವ ಬಳಿಕ ನೀಡುವ ಚಿಕಿತ್ಸೆಯಲ್ಲೂ ಮಹತ್ವದ ಸಂಶೋಧನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಚೀನಾದ ಮೇಲೆ ವಾಗ್ದಾಳಿ ನಡೆಸಿದ ಅವರು, ಚೀನಾವು ವೈರಸ್ ಹರಡದಂತೆ ತಡೆಯಬೇಕಿತ್ತು, ಈಗ ಕೊರೊನಾದಿಂದಾಗಿ ವಿಶ್ವವೇ ಸಂಕಷ್ಟಕ್ಕೆ ಒಳಗಾಗಿದೆ ಎಂದಿದ್ದಾರೆ.
ಫ್ಲೂ, ಸಾರ್ಸ್ ಅಥವಾ ಎಚ್1ಎನ್1ನಂತಹ ಸೋಂಕಿನಿಂದ ಬಳಲುವವರು ಇದ್ದಾರೆ. ಏನೇ ಆದರೂ ಕೊರೊನಾದಿಂದ ಬಳಲುತ್ತಿರುವವರ ಸಂಖ್ಯೆ ಅದಕ್ಕೆಲ್ಲಾ ಹೋಲಿಸಿದಾಗ ಬಹಳ ಕಡಿಮೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.