ವಿಶ್ವಸಂಸ್ಥೆ, ಜೂ.18 (DaijiworldNews/MB) : ಕಳೆದ 10 ವರ್ಷಗಳಿಂದಲೂ ಮರೀಚಿಕೆಯಾಗಿದ್ದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಾಗಿದ್ದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇನ್ನು ಎರಡು ವರ್ಷಗಳ ಅವಧಿಗೆ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.
ಭಾರತದೊಂದಿಗೆ ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ದೇಶಗಳು ಕೂಡಾ ಗೆಲುವು ಸಾಧಿಸಿದ್ದು 193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ 184 ಮತಗಳು ದೊರೆತಿವೆ.
ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೆದ ಚುನಾವಣೆಯಲ್ಲಿ 192 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು ಖಾಯಂರಹಿತ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಲು ಭಾರತಕ್ಕೆ 128 ರಾಷ್ಟ್ರಗಳ ಬೆಂಬಲ ಅಗತ್ಯವಿತ್ತು. ಆದರೆ ಭಾರತದ ಪರವಾಗಿ 184 ರಾಷ್ಟ್ರಗಳು ಮತ ಹಾಕಿದ್ದು ಭಾರತವು ಅಭೂತಪೂರ್ವ ಗೆಲುವು ಸಾಧಿಸಿದೆ.
ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರವಾಗಿದ್ದು ಭಾರತದೊಂದಿಗೆ ಎಸ್ಟೋನಿಯಾ, ನೈಜರ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟುನೀಶಿಯಾ ಮತ್ತು ವಿಯೆಟ್ನಾಂ ದೇಶಗಳೂ ಕೂಡಾ ಖಾಯಂ ಅಲ್ಲದ ರಾಷ್ಟ್ರಗಳಾಗಿದೆ.