ಕಠ್ಮಂಡು, ಜೂ.18 (DaijiworldNews/MB) : ಭಾರತಕ್ಕೆ ಸೇರಿದ ಕೆಲವು ಭೂ ಭಾಗಗಳನ್ನೂ ಒಳಗೊಂಡ ನೇಪಾಳದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಲ್ಲಿನ ಸಂಸತ್ ಸರ್ವಾನುಮತದಿಂದ ಅನುಮೋದಿಸಿದೆ.
ಶನಿವಾರ ಇದೇ ಮಸೂದೆಯನ್ನು ನೇಪಾಳ ಸಂಸತ್ನ ಕೆಳಮನೆಯು ಅಂಗೀಕರಿಸಿದ್ದು ಬುಧವಾರ ಮೇಲ್ಮನೆಯು ಮಸೂದೆಗೆ ಸರ್ವಾನುಮತದ ಅನುಮೋದನೆ ನೀಡಿದೆ.
ಮೇ 8 ರಂದು ಉತ್ತರಾಖಂಡದ ಧಾರ್ಚುಲಾದಿಂದ ಲಿಪುಲೇಖಕ್ಕೆ ಸಂಪರ್ಕ ಕಲ್ಪಿಸುವ 80 ಕಿ.ಮೀಗಳ ರಕ್ಷಣಾ ಕಾರ್ಯತಂತ್ರ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದು ಆ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಹದಗೆಟ್ಟಿದ್ದು ರಸ್ತೆ ಕಾಮಗಾರಿ ಉದ್ಘಾಟನೆಯಾದ ಮರುದಿನವೇ ನೇಪಾಳ ಹೊಸ ಭೂಪಟ ಬಿಡುಗಡೆ ಮಾಡಿದೆ.
ಭಾರತದ ಭೂಪ್ರದೇಶಗಳಾಗಿರುವ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ತಮ್ಮದು ಎಂದು ಹೇಳುತ್ತಿರುವ ನೇಪಾಳವು ಭಾರತ ನಿರ್ಮಿಸುತ್ತಿರುವ ರಸ್ತೆಯು ತನ್ನ ಭೂ ಪ್ರದೇಶವಾದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳ ಮೂಲಕ ಹಾದು ಹೋಗುತ್ತದೆ ಎಂದು ವಾದ ಮಾಡಿದೆ.
ಭಾರತವು ಈಗಾಗಲೇ ನೇಪಾಳದ ಪ್ರಾದೇಶಿಕ ವಿಸ್ತರಣೆಯನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದ್ದು ಈ ಪ್ರದೇಶಗಳು ಭಾರತಕ್ಕೆ ಸೇರಿದ್ದು ಎಂದು ಹಲವು ಐತಿಹಾಸಿಕ ದಾಖಲೆಗಳ ಮೂಲಕ ಭಾರತ ಪ್ರತಿಪಾದಿಸಿದೆ.