ವಾಷಿಂಗ್ಟನ್, ಜೂ 21 (DaijiworldNews/PY) : ಭಾರತ-ಚೀನಾ ನಡುವಿನ ವಿವಾದದ ಸಮಸ್ಯೆ ಬಗೆ ಹರಿಸಲು ನೆರವಾಗುತ್ತೇವೆ. ಅವರು ಅಲ್ಲಿ ದೊಡ್ಡ ಸಮಸ್ಯೆಯಲ್ಲಿ ಇದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ಕಠಿಣವಾಗಿದ್ದು, ನಾವು ಭಾರತ ಹಾಗೂ ಚೀನಾದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಅವರು ಸಂಘರ್ಷಕ್ಕೆ ಇಳಿದರೆ ಏನಾಗುತ್ತದೆ ನೋಡೋಣ ಎಂದು ತಿಳಿಸಿದ್ದಾರೆ.
ಭಾರತ-ಚೀನಾ ಸೇನಾಪಡೆಗಳ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆಸಿದ್ದ ಸಂಘರ್ಷದಲ್ಲಿ ಭಾರತದ ಒಬ್ಬ ಸೇನಾಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಚೀನಾವು ಇದರ ಬೆನ್ನಲೇ ಗಾಲ್ವಾನ್ ಕಣಿವೆಯ ಮೇಲಿನ ಸಾರ್ವಭೌಮತೆಯನ್ನು ಪ್ರತಿಪಾದನೆ ಮಾಡಿದ್ದು, ಆದರೆ ಭಾರತ ಈ ಪ್ರತಿಪಾದನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ.