ವಾಷಿಂಗ್ಟನ್, ಜೂ 23(DaijiworldNews/PY) : ಉದ್ಯೋಗಕ್ಕಾಗಿ ಅಮೆರಿಕ ಪ್ರವೇಶ ಮಾಡುವ ವಲಸಿಗರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ವೃತ್ತಿ ಆಧಾರಿತ ಹೊಸ ವೀಸಾಗಳಿಗೆ ತಾತ್ಕಾಲಿಕ ನಿಷೇಧ ಹೇರಿದ್ದಾರೆ.
ವರ್ಷದ ಕೊನೆಯವರೆಗೂ ವೀಸಾ ನಿಷೇಧ ಮುಂದುವರೆಯಲಿದೆ. ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು, ಜಾಗತಿಕವಾಗಿ ಕಾರ್ಯಾಚರಿಸುತ್ತಿರುವ ಅಮೆರಿಕದ ಕಂಪೆನಿಗಳು ವಿದೇಶಿ ಉದ್ಯೋಗಿಗಳನ್ನು ಅಮೆರಿಕಕ್ಕೆ ವರ್ಗಾಯಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಅಮೆರಿಕಕ್ಕೆ ಎಚ್-1ಬಿ ಅಡಿಯಲ್ಲಿ ಪ್ರವೇಶ ಮಾಡಿರುವ ಕಂಪ್ಯೂಟರ್ ಪ್ರೋಗ್ರಾಮಿಂಗ್ ಸೇರಿದಂತೆ ಇತರೆ ಕೌಶಲ ಆಧಾರಿತ ಕೆಲಸಗಾರರು, ಉದ್ಯೋಗ ಹಾಗೂ ಬೇಸಿಗೆ ಕಾರ್ಯಕ್ರಮಗಳ ಅಡಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು, ಕುಟುಂಬದ ಸಹಾಯಕರಾಗಿ ಬಂದಿರುವವರು ಹಾಗೂ
ಆತಿಥ್ಯ ಸೇವೆಗಳ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಇದೀಗ ವೀಸಾ ನಿರ್ಬಂಧ ಎದುರಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೂಗಲ್ ಸಿಇಒ ಭಾರತ-ಅಮೆರಿಕನ್ ಸುಂದರ್ ಪಿಚೈ ಅವರು, ವಲಸಿಗರು ಅಮೆರಿಕದ ಆರ್ಥಿಕ ಉನ್ನತಿಗಾಗಿ ಅಪಾರವಾದ ಕೊಡುಗೆ ನೀಡಿದ್ಧಾರೆ. ತಂತ್ರಜ್ಞಾನದಲ್ಲಿ ಗೂಗಲ್ ಕಂಪೆನಿಯನ್ನೂ ಕೂಡಾ ಜಾಗತಿಕ ನಾಯಕನಾಗಿ ಬೆಳೆಸಿದ್ದಾರೆ ಎಂದಿದ್ದಾರೆ.
ಹೊಸ ಆದೇಶದಿಂದಾಗಿ ಈಗಾಗಲೇ ಸೂಕ್ತ ವೀಸಾ ಹೊಂದಿರುವ ವಿದೇಶಿಯರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಇದರಿಂದ ಕೊರೊನಾ ವೈರಸ್ ಸಂಶೋಧನೆಗಳಲ್ಲಿ ತೊಡಗಿರುವ ಕೆಲವು ವೈದ್ಯಕೀಯ ಸಿಬ್ಬಂದಿಗೂ ವಿನಾಯಿತಿ ದೊರಕಲಿದೆ ಎಂದು ಹೇಳಿದ್ಧಾರೆ.
ಸಂಸ್ಥೆಗಳಿಗೆ ಅವಶ್ಯವಾಗಿರುವ ಕಾರ್ಯಗಳಿಗೆ ಹೊಸ ಆದೇಶದಿಂದಾಗಿ ಸೂಕ್ತವಾದ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಮೆರಿಕನ್ನರು ಮಾಡಲು ಸಮರ್ಥರಲ್ಲದ ಅಥವಾ ಮಾಡಲು ಇಚ್ಚಿಸಲು ಕಾರ್ಯಾಗಳಿಗೆ ಕೆಲಸಗಾರರನ್ನು ನೇಮಿಸಿಕೊಳ್ಳುವುದಕ್ಕೆ ಹೊಸ ಆದೇಶದಿಂದಾಗಿ ತಡೆ ಉಂಟಾಗಲಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.
ಎಚ್-2ಬಿ ವೀಸಾ ಮೂಲಕ ಟ್ರಂಪ್ ಅವರ ರೆಸಾರ್ಟ್ಗಳಲ್ಲಿ ಅಡುಗೆ ಹಾಗೂ ಪರಿಚಾರಕ ಸೇವೆಗಳಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದಾರೆ.