ಇಸ್ಲಾಮಾಬಾದ್, ಜು 17 (DaijiworldNews/PY): ಪಾಕಿಸ್ತಾನ ಸರ್ಕಾರ ಕುಲಭೂಷಣ್ ಜಾಧವ್ ಅವರಿಗೆ ಶುಕ್ರವಾರ ಮುಕ್ತ ರಾಜ ತಾಂತ್ರಿಕ ಸಂಪರ್ಕಕ್ಕೆ ಅನುಮತಿ ನೀಡಿದೆ.
ಈ ವಿಚಾರವಾಗಿ ಭಾರತ ಹಿಂದೆಯೇ ಬೇಡಿಕೆ ಇಟ್ಟಿತ್ತು. ಆದರೆ, ಪಾಕ್ ಸರ್ಕಾರ ಗುರುವಾರ ಕುಲಭೂಷಣ್ ಅವರನ್ನು ಭೇಟಿ ಮಾಡಲು ಇಸ್ಲಾಮಾಬಾದ್ನ ಜೈಲಿನಲ್ಲಿ ಅವಕಾಶ ಕಲ್ಪಿಸಿದೆ.
ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಹೋಗಿದ್ದರೂ ಕೂಡಾ ಪಾಕ್ ಸರ್ಕಾರ ಮಾತ್ರ ಮುಕ್ತವಾಗಿ ಮಾತನಾಡುವ ಅವಕಾಶ ನೀಡಲಿಲ್ಲ. ಭಾರತೀಯ ರಾಯಭಾರಿ ಕಚೇರಿ ಆಧಿಕಾರಿಗಳು ಕುಲಭೂಷಣ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭ ಪಾಕ್ ಸರ್ಕಾರ ತನ್ನ ಅಧಿಕಾರಿಗಳನ್ನು ಅವರ ಪಕ್ಕದಲ್ಲೇ ಕೂರಿಸಿದ್ದು, ಅವರ ಮುಕ್ತ ಮಾತುಕತೆಗೆ ತಡೆಯೊಡ್ಡಿದ್ದಾರೆ.
ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾತ್ಸವ ಅವರು, ಜಾಧವ್ ಅವರು ಒತ್ತಡದಲ್ಲಿರುವಂತೆ ಕಾಣುತ್ತಿದ್ದರು. ಜಾಧವ್ ಅವರಿಗೆ ಭಾರತೀಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಲು ಅವಕಾಶ ಮಾಡಿಕೊಡಲಿಲ್ಲ. ಅಲ್ಲದೇ, ಜಾಧವ್ ಅವರು ಹೊಂದಿರುವ ಕಾನೂನು ಹಕ್ಕುಗಳನ್ನು ವಿವರಿಸುವುದನ್ನು ತಡೆದಿದ್ದು, ಜಾಧವ್ ಅವರಿಂದ ಕಾನೂನು ಪ್ರಾತಿನಿಧ್ಯಕ್ಕೆ ಲಿಖಿತ ಅನುಮತಿ ಪಡೆಯದಂತೆ ಪಾಕ್ ಸರ್ಕಾರ ತಡೆನೀಡಿದೆ ಎಂದು ತಿಳಿಸಿದ್ದರು.
ಅಲ್ಲದೇ, ರಾಜತಾಂತ್ರಿಕ ಸಂಪರ್ಕ ನೀಡುವಂತೆ ಭಾರತ ಕೋರಿತ್ತು. ಭಾರತದ ಆಗ್ರಹಕ್ಕೆ ಮಣಿದ ಪಾಕ್ ಸರ್ಕಾರ ಜಾಧವ್ ಅವರಿಗೆ ಮೂರನೇ ಬಾರಿಯ ಮುಕ್ತ ರಾಜತಾಂತ್ರಿಕ ಸಂಪಕಕ್ಕೆ ಅನುಮತಿ ನೀಡಿದೆ.
ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಈ ವಿಚಾರವಾಗಿ ಹೇಳಿಕೆ ನೀಡಿದ್ದು, ಪಾಕಿಸ್ತಾನವು ಜಾಧವ್ ಅವರಿಗೆ ಭಾರತಕ್ಕೆ ಮೂರನೇ ಬಾರಿ ರಾಜತಾಂತ್ರಿಕ ಸಂಪರ್ಕಕ್ಕೆ ಅನುಮತಿ ನೀಡಿದೆ. ಭಾರತೀಯ ಅಧಿಕಾರಿಗಳು ಜಾಧವ್ ಅವರ ಭೇಟಿಯ ಸಂದರ್ಭ ಭದ್ರತಾ ಸಿಬ್ಬಂದಿಗಳು ಇರಬಾರದು ಎಂದು ಭಾರತ ಬೇಡಿಕೆಯಿಟ್ಟಿದ್ದು, ಹಾಗಾಗಿ ಭೇಟಿಯ ಸಂದರ್ಭ ಭದ್ರತಾ ಸಿಬ್ಬಂದಿಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ.