ಕೊಲಂಬೊ, ಜು. 20 (DaijiworldNews/MB) : ರಾವಣನದ್ದು ವಿಶ್ವದಲ್ಲೇ ಮೊದಲ ವಿಮಾನ. ಇದು ಬರೀ ಪುರಾತನ ಕತೆಯಲ್ಲಿ, ನಿಜ ವಿಷಯ, ಈ ಬಗ್ಗೆ ನಮ್ಮ ಬಳಿ ಬಹಳಷ್ಟು ದಾಖಲೆ ಇದೆ ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ದನಾತುಂಗೆ ಹೇಳಿಕೊಂಡಿದ್ದಾರೆ.
ನಮ್ಮಲ್ಲಿ ರಾವಣನೇ ವಿಶ್ವದ ಮೊದಲ ವಾಯುಯಾನಿ ಎಂಬುದಕ್ಕೆ ಬೇಕಾದಷ್ಟು ದಾಖಲೆಗಳು ಇದೆ. ಈ ಕುರಿತಾಗಿ ಅಧ್ಯಯನಗಳು ಕೂಡಾ ನಡೆಸಲಾಗುತ್ತಿದ್ದು ಮುಂದಿನ ಐದು ವರ್ಷದಲ್ಲಿ ಸಾಬೀತುಪಡಿಸುತ್ತೇವೆ ಎಂದು ಹೇಳಿದ್ದಾರೆ.
ರಾಮಾಯಣದಲ್ಲಿ ಬರುವ ರಾವಣ ಭಾರತೀಯರಿಗೆ ಖಳನಾಯಕ, ರಾಕ್ಷಸನಾಗಿದ್ದರೆ ಶ್ರೀಲಂಕದವರಿಗೆ ಆತ ಶ್ರೇಷ್ಠ ರಾಜ, ವಿದ್ವಾಂಸನಾಗಿದ್ದು ಅಲ್ಲಿ ರಾವಣನನ್ನು ಪೂಜಿಸುತ್ತಾರೆ. ಇತ್ತೀಚೆಗೆ ಶ್ರೀಲಂಕಾ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿರುವ ಮೊದಲ ಉಪಗ್ರಹಕ್ಕೂ ರಾವಣ ಎಂದು ಹೆಸರಿಟ್ಟಿದೆ.
ಇನ್ನು ಶ್ರೀಲಂಕಾ ಪ್ರವಾಸೋದ್ಯಮ ಮತ್ತು ವಾಯುಯಾನ ಸಚಿವಾಲಯವು ರಾವಣನ ವಿಶ್ವದ ಮೊದಲ ವಾಯುಯಾನಿ ಎಂಬುದಕ್ಕೆ ಸಾಕ್ಷಿಗಳನ್ನು ಒಟ್ಟುಗೂಡಿಸುತ್ತಿದ್ದು, ಈ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತನ್ನು ಪ್ರಕಟಿಸಿ ರಾವಣನ ಬಗ್ಗೆ ಯಾವುದೇ ದಾಖಲೆ, ಪುಸ್ತಕ, ಮಾಹಿತಿ ಇದ್ದಲ್ಲಿ ಕಳುಹಿಸಿಕೊಡಿ. ಪೌರಾಣಿಕ ಹಿನ್ನೆಲೆಯ ರಾಜನ ಬಗ್ಗೆ ಅಧ್ಯಯನ ನಡೆಸಲು ಸಹಾಯ ಮಾಡಿ ತಿಳಿಸಿದೆ.