ವಿಶ್ವಸಂಸ್ಥೆ, ಜು. 21 (DaijiworldNews/MB) : ಪೂರ್ವ ಆಫ್ರಿಕಾದ ರಾಷ್ಟ್ರಗಳು, ಭಾರತ ಮತ್ತು ಪಾಕಿಸ್ತಾನದಲ್ಲಿ ಮಿಡತೆ ದಾಳಿ ಭಾರೀ ಪ್ರಮಾಣದಲ್ಲಿ ಹೆಚ್ಚಾದ ಪರಿಣಾಮ ಆಹಾರ ಭದ್ರತೆಗೆ ಅಪಾಯ ಉಂಟಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಆತಂಕ ವ್ಯಕ್ತಪಡಿಸಿದೆ.
ಹವಮಾನದಲ್ಲಿ ಆದ ಬದಲಾವಣೆಯಿಂದಾಗಿ ಮಿಡತೆ ದಾಳಿ ಹೆಚ್ಚಾಗಿದೆ. ಮರುಭೂಮಿ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳ, ಮಳೆ ಹೆಚ್ಚಳ, ಉಷ್ಣವಲಯದಲ್ಲಿ ಚಂಡಮಾರುತ ಇವೆಲ್ಲದರ ಪರಿಣಾಮ ಮಿಡತೆಗಳು ಸಂತಾನೋತ್ಪತ್ತಿ ಹಾಗೂ ವಲಸೆಗೆ ಹೊಸ ಪರಿಸರವನ್ನು ಸೃಷ್ಟಿ ಮಾಡಿದೆ. ಹವಾಮಾನ ಬದಲಾವಣೆಗೆ ನಿಖರ ಕಾರಣ ಹೇಳಲು ಕಷ್ಟ. ಆದರೆ ಮಿಡತೆಗಳ ಸಂತಾನೋತ್ಪತ್ತಿಗೆ ಈ ವಾತಾವರಣ ಪೂರಕವಾಗಿದೆ ಎಂದು ಹೇಳಿದೆ.
ಭಾರತದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಬೆಳೆಯನ್ನು ತಿನ್ನುವ ಸಣ್ಣ ಕೊಂಬಿನ ಮಿಡತೆಗಳು ದಾಳಿ ನಡೆಸಿ ಅಪಾರ ನಷ್ಟ ಉಂಟಾಗಿದೆ. ಈ ಪ್ರದೇಶಗಳಲ್ಲಿ ಮಿಡತೆಗಳು ಮೊದಲಿನಿಂದಲೂ ಇದೆ. ಆದರೆ ಮಾನವನ ಕೆಲವು ಕಾರ್ಯದಿಂದ ಹವಾಮಾನದಲ್ಲಿ ಬದಲಾವಣೆ ಉಂಟಾಗಿ ಮಿಡತೆಗಳ ಸಂಖ್ಯೆಯೂ ವಿಪರೀತವಾಗಿ ಏರಿಕೆಯಾಗಿದೆ. ಇದೇ ಕಾರಣದಿಂದಾಗಿ ಪಾಕಿಸ್ತಾನವು ಕಳೆದ ಫೆಬ್ರುವರಿಯಲ್ಲಿ ತುರ್ತುಸ್ಥಿತಿಯನ್ನು ಘೋಷಿಸ ಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ಹೇಳಿದೆ.
ಇನ್ನು ಈ ಮಿಡತೆ ದಾಳಿಯಿಂದಾಗಿ 2019ರಲ್ಲಿ ಸೊಮಾಲಿಯಾ ಹಾಗೂ ಇಥಿಯೋಪಿಯಾದ ಸುಮಾರು 70,000 ಹೆಕ್ಟೇರ್ ಹೊಲದ ಬೆಳೆಗಳು ಹಾಗೂ ಕೀನ್ಯಾದ 2,400 ಕಿ.ಮೀ ಉದ್ದದ ಹುಲ್ಲುಗಾವಲು ನಾಶವಾಗಿದೆ. ಇಥಿಯೋಪಿಯಾದ 1.14 ಲಕ್ಷ ಹೆಕ್ಟೇರ್ ಹುಲ್ಲುಗಾವಲು, 41,000 ಹೆಕ್ಟೇರ್ ಜೋಳ ಹಾಗೂ 36,000 ಹೆಕ್ಟೇರ್ ಗೋದಿ ಬೆಳೆ 2019ರ ಡಿಸೆಂಬರ್ನಿಂದ 2020ರ ಮಾರ್ಚ್ವರೆಗೆ ಮಿಡತೆ ದಾಳಿಯಿಂದಾಗಿ ನಾಶವಾಗಿದೆ ಎಂದು ವರದಿಯಾಗಿದೆ.