ವಾಷಿಂಗ್ಟನ್, ಜು. 22 (DaijiworldNews/MB) : ಕೊರೊನಾ ಲಸಿಕೆಯ ಸಂಶೋಧನೆ ಹಾಗೂ ನೂರಾರು ಕಂಪೆನಿಗಳ ಮಾಹಿತಿಯನ್ನು ಹ್ಯಾಕ್ ಮಾಡಿ ಕದಿಯಲು ಯತ್ನಿಸಿದ್ದಕ್ಕಾಗಿ ಇಬ್ಬರು ಚೀನಾದ ಪ್ರಜೆಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಯುಎಸ್ ನ್ಯಾಯ ಇಲಾಖೆ ಮಂಗಳವಾರ ತಿಳಿಸಿದೆ.
ಲಿ ಕ್ಸಿಯಾವು (34) ಹಾಗೂ ಡಾಂಗ್ ಝೀಆಝಿ (33) ಎಂಬ ಚೀನಾದ ಹ್ಯಾಕರ್ಗಳಾಗಿದ್ದು ಅವರು ಅಮೆರಿಕ, ಚೀನಾ ಹಾಗೂ ಹಾಂಗ್ಕಾಂಗ್ನ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಹಾಯಕ ಅಟಾರ್ನಿ ಜನರಲ್ ಜಾನ್ ಡೆಮರ್ಸ್ ಹೇಳಿದ್ದಾರೆ.
ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಮೊದಲ ಬಾರಿ ಪತ್ತೆಯಾಗಿದ್ದು ಚೀನಾವೇ ಕೊರೊನಾ ವೈರಸ್ ಹರಡಲು ಕಾರಣ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ಬಾರಿ ಆರೋಪ ಮಾಡಿದ್ದು ಕೆಲವು ವಾರಗಳ ಹಿಂದೆ ಚೀನಾ ಕೊರೊನಾ ಲಸಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಕದಿಯಲು ಯತ್ನಿಸುತ್ತಿದೆ ಎಂದು ದೂರಿದ್ದರು. ಈ ಎಲ್ಲಾ ಬೆಳವಣಿಗೆಯ ಬಳಿಕ ಈಗ ಅಮೆರಿಕಾವು ಚೀನಾದ ಇಬ್ಬರ ಮೇಲೆ ದೋಷಾರೂಪಣೆ ಪಟ್ಟಿ ದಾಖಲಿಸಿದೆ.
ಈ ಸೈಬರ್ ಅಪರಾಧಿಗಳಿಗೆ ರಕ್ಷಣೆ ನೀಡುವ ಕಾರ್ಯದಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದೊಂದಿಗೆ ಚೀನಾವೂ ಈಗ ಸೇರಿಕೊಂಡಿದೆ ಅಮೆರಿಕ ದೂರಿರುವುದಾಗಿ ವರದಿಯಾಗಿದೆ.
ಚೆಂಗ್ಡುವಿನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದ ಅಪರಾಧಿಗಳಾದ ಲಿ ಮತ್ತು ಡಾಂಗ್ ಅವರು ಕಳೆದ 10 ವರ್ಷಗಳಿಂದ ಕಂಪ್ಯೂಟರ್ ಹ್ಯಾಕಿಂಗ್ ಅಭಿಯಾನದಲ್ಲಿ ತೊಡಗಿದ್ದಾರೆ. ಅವರು ಅಮೆರಿಕಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಜಪಾನ್, ಲಿಥುವೇನಿಯಾ, ನೆದರ್ಲ್ಯಾಂಡ್, ಸ್ಪೇನ್, ದಕ್ಷಿಣ ಕೊರಿಯಾ, ಸ್ವೀಡನ್ ಮತ್ತು ಬ್ರಿಟನ್ ದೇಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.