ಕಾಬೂಲ್, ಜು 22 (DaijiworldNews/PY): ತನ್ನ ಕಣ್ಣೆದುರೇ ಅಪ್ಪ-ಅಮ್ಮನನ್ನು ಗುಂಡಿಕ್ಕಿ ಹತ್ಯೆಗೈದ ತಾಲಿಬಾನ್ ಉಗ್ರರಿಗೆ ಗುಂಡಿನಿಂದಲೇ ಉತ್ತರನೀಡಿರುವ 14ರ ಧೀರ ಬಾಲಕಿ ಖಮರ್ ಗುಲ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ಖಮರ್ನ ಅಪ್ಪ-ಅಮ್ಮ ಸರ್ಕಾರಕ್ಕೆ ತಾಲಿಬಾನ್ ಉಗ್ರರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಅನುಮಾನಗೊಂಡಿದ್ದ ಉಗ್ರರು ಘೋರ್ ಪ್ರಾಂತ್ಯದಲ್ಲಿರುವ ಖಮರ್ ಗುಲ್ ಮನೆಗೆ ನುಗ್ಗಿದ್ದು, ಆಕೆಯ ಕಣ್ಣೆದುರೇ ಆಕೆಯ ಪೋಷಕರನ್ನು ಹೊರಕ್ಕೆ ಎಳೆದು ತಂದು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಈ ದೃಶ್ಯವನ್ನು ನೋಡಿದ ಆಕೆ ಭಯಗೊಂಡು ಅವಿತು ಕುಳಿತ್ತಿದ್ದಳು. ತನ್ನ ಕಣ್ಣೆದುರೇ ತನ್ನ ಪೋಷಕರು ಚೀರಾಡಿ ಪ್ರಾಣ ಬಿಟ್ಟಿದ್ದನ್ನು ಕಂಡ ಖಮರ್ ಧೈರ್ಯಗುಂದದೇ ಎಕೆ-47ಗನ್ ಅನ್ನು ಹೆಗಲೇರಿಕೊಂಡು, ತನ್ನ ಪೋಷಕರನ್ನು ಹತ್ಯೆಗೈದ ತಾಲಿಬಾನ್ ಉಗ್ರರತ್ತ ಗುಂಡಿನದಾಳಿ ನಡೆಸಿದ್ದಾಳೆ. ಇದನ್ನು ತಿಳಿದ ಉಗ್ರರು ಅಲ್ಲಿಂದ ಓಡಿಹೋಗಿದ್ದಾರೆ. ಆದರೆ, ತನ್ನ ಪೋಷಕರ ಸಾವಿಗೆ ಕಾರಣರಾದ ಉಗ್ರರ ಪೈಕಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಳೆ. ಉಳಿದ ತಾಲಿಬಾನ್ ಉಗ್ರರು ಪರಾರಿಯಾಗಿದ್ದಾರೆ.
ಸ್ವಲ್ಪ ಸಮಯದ ಬಳಿಕ ಮತ್ತೆ ಧಾವಿಸಿ ಬಂದ ಮತ್ತೊಂದು ಉಗ್ರರ ತಂಡವೊಂದು ಖಮರ್ನನ್ನು ಹತ್ಯೆ ಮಾಡಲು ಮುಂದಾಗಿತ್ತು. ಆದರೆ, ಆ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಇದನ್ನು ನೋಡಿದ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಘೋರ್ ಪ್ರಾಂತ್ಯದ ಪೊಲೀಸ್ ವರಿಷ್ಠಾಧಿಕಾರಿ ಹಬಿಬುರೆಹಮಾನ್ ಮಲೆಕ್ಜದ ತಿಳಿಸಿದ್ದಾರೆ.
ನಂತರ ಪೊಲೀಸರು ಖಮರ್ಗುಲ್ ಹಾಗೂ ಆಕೆಯ ಕಿರಿಯ ಸೋದರನನ್ನು ತಮ್ಮ ಸುಪರ್ದಿಗೆಗೆ ತೆಗೆದುಕೊಂಡಿದ್ದು, ರಕ್ಷಣೆ ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.