ಜಿನಿವಾ, ಜು. 23 (DaijiworldNews/MB) : ''ಕೊರೊನಾ ಲಸಿಕೆ ಬಳಕೆಯನ್ನು 2021ರ ಪ್ರಾರಂಭದವರೆಗೂ ನಿರೀಕ್ಷಿಸಲಾಗದು'' ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಜ್ಞರು ಬುಧವಾರ ಅಭಿಪ್ರಾಯ ಪಟ್ಟಿದ್ದಾರೆ.
''ಕೊರೊನಾ ಸೋಂಕಿನ ವಿರುದ್ಧದ ಲಸಿಕೆಯನ್ನು ಜಗತ್ತಿನಾದ್ಯಂತ ಸಂಶೋಧಕರು ಅಭಿವೃದ್ಧಿ ಪಡಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಇದು ಕೊನೆಯ ಹಂತವನ್ನು ತಲುಪಿದೆ. ಆದರೆ ಅದರ ಬಳಕೆಯ ಆರಂಭವು 2021ರವರೆಗೆ ನಡೆಯದು. ಹಲವಾರು ಕಡೆಗಳಲ್ಲಿ ಲಸಿಕೆ ಸಂಶೋಧನೆ ನಡೆಯುತ್ತಿದ್ದು ಯಾವುದೂ ಕೂಡಾ ವಿಫಲವಾಗಿಲ್ಲ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಲಸಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಈವರೆಗೂ ನೀಡಲಾಗಿದೆ. 2021ರಲ್ಲಿ ಮೊದಲ ಹಂತದ ಲಸಿಕೆಯನ್ನು ನಿರೀಕ್ಷಿಸಬಹುದು'' ಎಂದು ಹೇಳಿದ್ದಾರೆ.
''ಇನ್ನು ಈ ರೋಗಕ್ಕೆ ಯಶಸ್ವಿ ಲಸಿಕೆ ಪತ್ತೆ ಹಚ್ಚಿದ ಬಳಿಕ ಇದು ಕೇವಲ ಶ್ರೀಮಂತರಿಗೆ ಲಭ್ಯವಾಗಿರುವ ಲಸಿಕೆಯಾಗುವುದಿಲ್ಲ. ಬದಲಾಗಿ ಎಲ್ಲಾ ನಾಗರಿಕರಿಗೂ ಇದು ದೊರೆಯಲಿದೆ. ಪ್ರಸ್ತುತ ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಸೋಂಕು ಹರಡುವುದನ್ನು ತಡೆಗಟ್ಟುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಲಸಿಕೆಗೆ ವಿಶ್ವ ಸಂಸ್ಥೆ ಪ್ರಾಮುಖ್ಯತೆ ನೀಡುತ್ತದೆ'' ಎಂದು ತಿಳಿಸಿದ್ದಾರೆ.