ವಾಷಿಂಗ್ಟನ್, ಜು. 25 (DaijiworldNews/MB) : ಅಮೆರಿಕಾದಲ್ಲಿ ಬಂಧನವಾಗಿರುವ 2008ರ ಮುಂಬೈ ದಾಳಿ ಪ್ರಕರಣದ ಪ್ರಧಾನ ಸಂಚುಕೋರರಲ್ಲಿ ಓರ್ವನಾದ ಉಗ್ರ ತಹವ್ವೂರ್ ರಾಣಾನ ಜಾಮೀನು ಅರ್ಜಿಯನ್ನು ನ್ಯಾಯಾಲಕ ವಜಾ ಮಾಡಿದೆ.
ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಈತನಿಗೆ ಭಾರತದಲ್ಲಿ ಮರಣದಂಡನೆಯಾಗುವ ಸಾಧ್ಯತೆಯಿದ್ದು ಈಗ ಜಾಮೀನು ನೀಡಿದ್ದಲ್ಲಿ ಈತ ಕೆನಾಡಗೆ ಪರಾರಿಯಾಗುವ ಅಪಾಯವಿದೆ. ಈತ ಪರಾರಿಯಾದ್ದಲ್ಲಿ ಅಮೆರಿಕಾದ ಅಧಿಕಾರಿಗಳಿಗೆ ಅಪಮಾನವಾದಂತೆ. ಇದರಿಂದಾಗಿ ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧಕ್ಕೂ ಕೂಡಾ ಧಕ್ಕೆ ಉಂಟಾಗಬಹುದು ಎಂದು ರಾಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅಭಿಪ್ರಾಯ ಪಟ್ಟಿದ್ದು ರಾಣಾನ ಜಾಮೀನು ಅರ್ಜಿ ತಿರಸ್ಕರಿಸಿದೆ.
ರಾಣಾ ಪಾಕಿಸ್ತಾನ ಮೂಲದವನಾಗಿದ್ದು ಕೆನಡಾದ ಪ್ರಜೆಯಾಗಿದ್ದಾನೆ. ಚಿಕಾಗೋದಲ್ಲಿ ಉದ್ಯಮ ನಡೆಸುತ್ತಿದ್ದ ಈತನು ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒರ್ವನಾಗಿರುವ ಈತ ಮುಂಬೈ ದಾಳಿಯ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯ ಬಾಲ್ಯ ಸ್ನೇಹಿತನಾಗಿದ್ದಾನೆ.
ಇನ್ನು ಭಾರತವು ಈಗಾಗಲೇ 59 ವರ್ಷದ ರಾಣಾನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿದ್ದು ಆತನನ್ನು ಹಸ್ತಾಂತರ ಮಾಡುವಂತೆ ಭಾರತವು ಅಮೆರಿಕಕ್ಕೆ ಮನವಿ ಮಾಡಿದೆ. ಈ ಪ್ರಕರಣದ ಮತ್ತೋರ್ವ ಆರೋಪಿ ಡೇವಿಡ್ ಹೆಡ್ಲಿ ಈಗ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.